ನವದೆಹಲಿ: ಗಾಜಾದಲ್ಲಿ ಸಾವಿರಾರು ನಾಗರಿಕರ ಹತ್ಯೆಗೆ ಕಾರಣವಾದ ಭಯಾನಕ ದೌರ್ಜನ್ಯಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೌನ ತಾಳಿಸುವುದಕ್ಕೆ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಗಾಜಾದಲ್ಲಿ ನಡೆದ ದೌರ್ಜನಗಳ ಬಗ್ಗೆ ಪ್ರಧಾನಿ ಮೋದಿಯವರು ಸಂಪೂರ್ಣ ಮೌನವನ್ನು ಕಾಯ್ದುಕೊಂಡಿದ್ದಾರೆ. ಇದು ತೀವ್ರ ನೈತಿಕ ಹೇಡಿತನ ಮತ್ತು ಭಾರತವು ಪ್ರತಿಪಾದಿಸಿದ ಎಲ್ಲ ತತ್ವಗಳಿಗೂ ಎಸಗುವ ದ್ರೋಹವಾಗಿದೆ ಎಂದು ಟೀಕಿಸಿದ್ದಾರೆ.
’ತಮ್ಮ ಆಪ್ತ ಸ್ನೇಹಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಸಮಾಧಾನಪಡಿಸುವ ಸಲುವಾಗಿ ಮೋದಿ ಅವರು ‘ಗಾಜಾಗೆ ಹೊಸ 20 ಅಂಶಗಳ ಯೋಜನೆ‘ಯನ್ನು ಸ್ವಾಗತಿಸಿದ್ದಾರೆ. ಆದರೆ, ಈ ಯೋಜನೆಯ ಬಗ್ಗೆ ಮೂಲಭೂತ ಮತ್ತು ಗೊಂದಲದ ಪ್ರಶ್ನೆಗಳು ಹಾಗೆಯೇ ಉಳಿದಿವೆ‘ ಎಂದು ಹೇಳಿದ್ದಾರೆ.
ಪ್ರಸ್ತಾಪಿತ ಯೋಜನೆಯ ಆಡಳಿತ ವ್ಯವಸ್ಥೆಯಲ್ಲಿ ಗಾಜಾದ ಜನರು ಎಲ್ಲಿದ್ದಾರೆ? ಪೂರ್ಣ ಪ್ರಮಾಣದ ಪ್ಯಾಲೆಸ್ಟೀನಿಯನ್ ರಾಷ್ಟ್ರ ಅಸ್ತಿತ್ವಕ್ಕೆ ಬರುವ ಮಾರ್ಗಸೂಚಿ ಎಲ್ಲಿದೆ? ಈಗಾಗಲೇ ವಿಶ್ವಸಂಸ್ಥೆಯ 157 ಸದಸ್ಯ ರಾಷ್ಟ್ರಗಳು ಗುರುತಿಸಿರುವ ಪ್ಯಾಲೆಸ್ಟೀನಿಯನ್ ರಾಜ್ಯತ್ವವನ್ನು ಅಮೆರಿಕ ಮತ್ತು ಇಸ್ರೇಲ್ ಎಷ್ಟು ವರ್ಷ ನಿರ್ಲಕ್ಷಿಸುತ್ತಲೇ ಇರುತ್ತವೆ..? ಕಳೆದ ಇಪ್ಪತ್ತು ತಿಂಗಳುಗಳಲ್ಲಿ ಗಾಜಾದಲ್ಲಿ ನಡೆದ ನರಮೇಧಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.