ನವದೆಹಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿರುವ ಪರಸರ ಕಾರ್ತಕರ್ತ ಸೋನಮ್ ವಾಂಗ್ಚುಕ್ ಬಿಡುಗಡೆ ಕೋರಿ ಅವರ ಪತ್ನಿ ಗೀತಾಂಜಲಿ ಅಂಗ್‌ಮೊ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಹಾಗೂ ಸಂವಿಧಾನದ ಆರನೇ ಪರಿಚ್ಚೇದಕ್ಕೆ ಸೇರಿಸಲು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 4 ಮಂದಿ ಮೃತಪಟ್ಟು, 90 ಮಂದಿ ಗಾಯಗೊಂಡಿದ್ದರು. ಘಟನೆ ನಡೆದು ಎರಡು ದಿನಗಳ ಬಳಿಕ ಸೆಪ್ಟೆಂಬರ್ 26ರಂದು ಸೋನಮ್ ಅವರನ್ನು ಬಂಧಿಸಲಾಗಿತ್ತು.
ಗೀತಾಂಜಲಿ ಆಂಗ್ಮೋ ಅವರು ಸಂವಿಧಾನದ 32ನೇ ವಿಧಿಯಡಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಮ್ಮ ಪತಿಯ ಬಂಧನ ಅಸಂವಿಧಾನಿಕ ಎಂದು ಆಕ್ಷೇಪಿಸಿದ್ದಾರೆ. ತುರ್ತು ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡುವಂತೆ ಕೋರಿದ್ದಾರೆ.
ವಕೀಲ ಸರ್ವಂ ರೀಟಂ ಖಾರೆ ಅವರ ಮೂಲಕ ಅರ್ಜಿ ಸಲ್ಲಿಸಿರುವ ಅಂಗ್‌ಮೊ, ವಾಂಗ್ಚುಕ್ ಅವರ ಬಂಧನವನ್ನು ಪ್ರಶ್ನಿಸಿದ್ದಾರೆ, ಅಲ್ಲದೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ. ಜೊತೆಗೆ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಕಿರುವುದನ್ನೂ ಪ್ರಶ್ನೆ ಮಾಡಿದ್ದಾರೆ.
ವಾಂಗ್ಚುಕ್ ಅವರನ್ನು ಬಂಧನದ ಆದೇಶ ಪ್ರತಿ ಇನ್ನೂ ನನ್ನ ಕೈಸೇರಿಲ್ಲ, ಅವರೊಂದಿಗೆ ಸಂಪರ್ಕವೂ ಇಲ್ಲ ಎಂದು ಅಂಗ್‌ಮೊ ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿತ್ತು. ಪ್ರಸ್ತುತ ಅವರನ್ನು ರಾಜಸ್ಥಾನದ ಜೋಧ್‌ಪುರ ಕಾರಾಗೃಹದಲ್ಲಿ ವಶದಲ್ಲಿರಿಸಲಾಗಿದೆ.
ಬಂಧನ ಪ್ರಶ್ನಿಸುವ ಹಿನ್ನಲೆಯಲ್ಲಿ ಸಲ್ಲಿಸಲಾದ ಕಾರಣಗಳ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ದಸರಾ ರಜೆಯ ನಂತರ ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆ ಮರುಪ್ರಾರಂಭವಾದಾಗ ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವ ಸಾಧ್ಯತೆ ಇದೆ.
ನವೋದ್ಯಮಿ ಹಾಗೂ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಸೋನಮ್ ವಾಂಗ್‌ಚುಕ್, ಲಡಾಖ್‌ನ ಪರಿಸರ ಸಂರಕ್ಷಣೆ, ಹಿಮಾಲಯದ ಪರಿಸ್ಥಿತಿ ಮತ್ತು ಸ್ಥಳೀಯ ಜನರ ಹಕ್ಕುಗಳ ವಿಷಯಗಳಲ್ಲಿ ದೀರ್ಘಕಾಲದಿಂದ ಸಕ್ರಿಯ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.