ಬೇತುಲ್: ಮಧ್ಯ ಪ್ರದೇಶದ ಬೇತುಲ್ ಜಿಲ್ಲೆಯ ಆಮ್ಲಾ ಬ್ಲಾಕ್‌ನ ಇಬ್ಬರು ಮಕ್ಕಳು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿದ ನಂತರ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಮಧ್ಯ ಪ್ರದೇಶದಲ್ಲಿ ಕೋಲ್ಡ್ರಿಫ್ ಸಿರಪ್ ನಿಂದ ಮೃತಪಟ್ಟ ಮಕ್ಕಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಪರೀಕ್ಷೆಯಲ್ಲಿ ಕೋಲ್ಡ್ರಿಫ್ ಸಿರಪ್ ನಲ್ಲಿ ಡೈಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ರಾಸಾಯನಿಕ ಅಂಶ ಇರುವುದು ಕಂಡುಬಂದಿರುವುದರಿಂದ ಇದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮೃತ ಮಕ್ಕಳನ್ನು ಕಲ್ಮೇಶ್ವರ ಗ್ರಾಮದ ಕಮಲೇಶ್ ಅವರ ಮಗ ಕಬೀರ್(4) ಮತ್ತು ಜಾಮುನ್ ಬಿಚುವಾ ಗ್ರಾಮದ ನಿಖ್ಲೇಶ್ ಅವರ ಮಗ ಎರಡೂವರೆ ವರ್ಷದ ಗಾರ್ಮಿತ್ ಎಂದು ಗುರುತಿಸಲಾಗಿದೆ ಎಂದು ಆಮ್ಲಾ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಅಶೋಕ್ ನರ್ವಾರೆ ಅವರು ತಿಳಿಸಿದ್ದಾರೆ.
"ಜ್ವರದಿಂದ ಬಳಲುತ್ತಿದ್ದ ಈ ಮಕ್ಕಳನ್ನು ಚಿಕಿತ್ಸೆಗಾಗಿ ನೆರೆಯ ಚಿಂದ್ವಾರ ಜಿಲ್ಲೆಯ ಪರಾಸಿಯಾಗೆ ಕರೆದೊಯ್ಯಲಾಯಿತು. ಅಲ್ಲಿ ಅವರ ಸ್ಥಿತಿ ಹದಗೆಟ್ಟಿತು. ಸಿರಪ್‌ನಿಂದ ಸಾವು ಸಂಭವಿಸಿದೆಯೇ ಎಂದು ಇನ್ನೂ ದೃಢಪಟ್ಟಿಲ್ಲ. ವಿವರವಾದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ನನಗೆ ನಿರ್ದೇಶಿಸಲಾಗಿದೆ" ಎಂದು ಡಾ. ನರ್ವಾರೆ ಹೇಳಿದ್ದಾರೆ.
"ಎರಡೂ ಮಕ್ಕಳಲ್ಲಿ ಮೂತ್ರಪಿಂಡದ ಸಮಸ್ಯೆಗಳು ಮತ್ತು ಹೊಟ್ಟೆಯ ಊತದಂತಹ ಲಕ್ಷಣಗಳು ಕಾಣಿಸಿಕೊಂಡಿದ್ದವು ಮತ್ತು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇತುಲ್‌ನಿಂದ ಭೋಪಾಲ್‌ಗೆ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪರಾಸಿಯಾ ಮೂಲದ ವೈದ್ಯ ಡಾ. ಪ್ರವೀಣ್ ಸೋನಿ ಅವರು ಶಿಫಾರಸು ಮಾಡಿದ ಸಿರಪ್ ಸೇವಿಸಿದ ನಂತರ ಕಬೀರ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಪ್ರವೀಣ್ ಸೋನಿ ಅವರನ್ನು ಶನಿವಾರ ತಡರಾತ್ರಿ ಬಂಧಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪರಾಸಿಯಾ ಪೊಲೀಸರ ಪ್ರಕಾರ, ಸೋನಿ ಸರ್ಕಾರಿ ವೈದ್ಯರಾಗಿದ್ದರೂ, ಖಾಸಗಿ ಚಿಕಿತ್ಸಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದರು ಮತ್ತು ಸಿರಪ್ ಅನ್ನು ಶಿಫಾರಸು ಮಾಡುತ್ತಿದ್ದರು.