ಚಿಂದ್ವಾರ: ಮಧ್ಯಪ್ರದೇಶದ ಚಿಂದ್ವಾರದಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿದ ನಂತರ ಮಂಗಳವಾರ ಮತ್ತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಜಿಲ್ಲೆಯ ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇಂದು ಮತ್ತೆ ಇಬ್ಬರು ಮಕ್ಕಳ ಸಾವು ವರದಿಯಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 16 ಮಕ್ಕಳು ಸಾವನ್ನಪ್ಪಿದ್ದಾರೆ" ಎಂದು ಚಿಂದ್ವಾರ ಹೆಚ್ಚುವರಿ ಕಲೆಕ್ಟರ್ ಧೀರೇಂದ್ರ ಸಿಂಗ್ ಹೇಳಿದ್ದಾರೆ.
ಇದಕ್ಕೂ ಮೊದಲು, ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ಸೇವಿಸಿದ್ದ ಚಿಂದ್ವಾರದ 14 ಮಕ್ಕಳ ಸಾವನ್ನು ರಾಜ್ಯ ಸರ್ಕಾರ ದೃಢಪಡಿಸಿತ್ತು.
ಜಿಲ್ಲೆಯ ಜುನ್ನಾರ್ಡಿಯೊ ನಿವಾಸಿ ಜಯುಷಾ ಯದುವಂಶಿ(2) ಮಂಗಳವಾರ ನಾಗ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಚಿಂದ್ವಾರದ ಇನ್ನೂ ಆರು ಮಕ್ಕಳು ನಾಗ್ಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಐದು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಹೆಚ್ಚುವರಿ ಕಲೆಕ್ಟರ್ ತಿಳಿಸಿದ್ದಾರೆ.
ಟಾಮಿಯಾ ಬ್ಲಾಕ್‌ನ ಭರಿಯಾಧಾನ ಗ್ರಾಮದ ನಿವಾಸಿಯಾದ ಎರಡೂವರೆ ವರ್ಷದ ಧನಿ ಡೆಹರಿಯಾ ಎಂಬ ಮಗು ಸೋಮವಾರ ನಾಗ್ಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಳು.
ವೈದ್ಯರು ಸೂಚಿಸಿದ ಕೋಲ್ಡ್ ಸಿರಪ್ ಸೇವಿಸಿದ ನಂತರ ಆಕೆಯ ಆರೋಗ್ಯ ಹದಗೆಟ್ಟಿದೆ ಮತ್ತು ಆಕೆಯ ಮೂತ್ರಪಿಂಡಗಳು ವಿಫಲವಾಗಿವೆ ಎಂದು ಬಾಲಕಿಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.