ಸೀತಾಪುರ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಆಘಾತಕಾರಿ ಮಾತುಗಳು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ರಾತ್ರಿ ಹೊತ್ತಲ್ಲಿ ಹಾವಾಗಿ ಬದಲಾಗುವ ಪತ್ನಿ ಕಚ್ಚಲು ಓಡಾಡಿಸುತ್ತಾಳೆ ಎಂದು ಆತ ಹೇಳಿಕೊಂಡಿದ್ದಾನೆ.
ಸಾಮಾನ್ಯವಾಗಿ ಸಮಾಧಾನ್ ದಿವಸ್ (ಸಾರ್ವಜನಿಕ ಕುಂದುಕೊರತೆ ಆಲಿಸುವ ದಿನ) ನಿವಾಸಿಗಳು ವಿದ್ಯುತ್, ರಸ್ತೆ ಮತ್ತು ಪಡಿತರ ಚೀಟಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಪ್ರಸ್ತಾಪಿಸುತ್ತಾರೆ.
ಆದರೆ ಮಹಮೂದಾಬಾದ್ ಪ್ರದೇಶದ ಲೋಧ್ಸಾ ಗ್ರಾಮದ ನಿವಾಸಿ ಮೆರಾಜ್, "ಸರ್, ನನ್ನ ಹೆಂಡತಿ ನಸೀಮುನ್ ರಾತ್ರಿಯಲ್ಲಿ ಸರ್ಪವಾಗಿ ಬದಲಾಗಿ ನನ್ನನ್ನು ಕಚ್ಚಲು ಓಡಾಡಿಸುತ್ತಾಳೆ ಎಂದು ಹೇಳಿಕೊಂಡಿದ್ದಾರೆ.
ಆಕೆ ಹಲವು ಬಾರಿ ನನ್ನನ್ನು ಕೊಲ್ಲಲು ಯತ್ನಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಪ್ರತಿ ಬಾರಿಯೂ ಸರಿಯಾದ ಸಮಯಕ್ಕೆ ಎಚ್ಚರಗೊಂಡು ಸಾವಿನಿಂದ ತಪ್ಪಿಸಿಕೊಂಡಿದ್ದೇನೆ. ನನ್ನ ಹೆಂಡತಿ ಮಾನಸಿಕವಾಗಿ ಹಿಂಸಿಸುತ್ತಾಳೆ. ನಾನು ಮಲಗಿರುವಾಗ ಯಾವಾಗಬೇಕಾದ್ರೂ ನನ್ನನ್ನು ಕೊಲ್ಲಬಹುದು" ಎಂದು ಅವರು ಹೇಳಿದ್ದಾರೆ. ಈ ಮಾತು ಕೇಳಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.ಇದು ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತಗತಿಯಲ್ಲಿ ಹರಡಿ ಸಖತ್ ವೈರಲ್ ಆಗುತ್ತಿದೆ. ಬಳಕೆದಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಆಕೆ ಎಲ್ಲಿಯೂ ನಾಗಮಣಿ ಇಟ್ಟಿರಬೇಕು ಎಂದು ನೆಟ್ಟಿಗರೊಬ್ಬರು ಕೇಳಿದ್ದರೆ, ಇನ್ನೊಬ್ಬರು ನೀನು ಕೂಡಾ ಹಾವು ಆಗು ಎಂದಿದ್ದಾರೆ. ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಉಪವಿಭಾಗಾಧಿಕಾರಿ ಹಾಗೂ ಪೊಲೀಸರಿಗೆ ಸೂಚಿಸಿದ್ದಾರೆ. ಇದು ಮಾನಸಿಕ ಕಿರುಕುಳದ ಸಂಭಾವ್ಯ ಪ್ರಕರಣ ಎಂದು ಪರಿಗಣಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ