ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ವಿಷಯುಕ್ತ ಕೆಮ್ಮುವಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಔಷಧಗಳ ಸುರಕ್ಷತಾ ಕಾರ್ಯವಿಧಾನಗಳಲ್ಲಿ ತನಿಖೆ ಮತ್ತು ವ್ಯವಸ್ಥಿತ ಸುಧಾರಣೆಗೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ವಕೀಲ ವಿಶಾಲ್ ತಿವಾರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠ ವಜಾಗೊಳಿಸಿತು.
ಅರ್ಜಿದಾರರು ಪತ್ರಿಕೆ ಓದಿ ನ್ಯಾಯಾಲಕ್ಕೆ ಬಂದಿದ್ದಾರೆ ಎಂದು ಉನ್ನತ ಕಾನೂನು ಅಧಿಕಾರಿ ಹೇಳಿದರು ಆರಂಭದಲ್ಲಿ ನೋಟಿಸ್ ಜಾರಿ ಮಾಡಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ತದನಂತರ ಅದನ್ನು ವಜಾಗೊಳಿಸಿತು.
ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ತುಷಾರ್ ಮೆಹ್ತಾ, ಸದ್ಯಕ್ಕೆ ಯಾವುದೇ ರಾಜ್ಯದ ಪರ ವಾದಿಸುತ್ತಿಲ್ಲ. ಆದರೆ ತಮಿಳುನಾಡು ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಗಂಭೀರತೆಯೊಂದಿಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಇದಲ್ಲದೆ ರಾಜ್ಯಗಳಲ್ಲಿ ಸರಿಯಾದ ಕಾನೂನು ಜಾರಿ ಕಾರ್ಯವಿಧಾನಗಳಿವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲಿ ಇದುವರೆಗೆ ಎಷ್ಟು ಸಾರ್ವಜನಿಕ ಹಿತಾಸಕ್ತಿಗಳನ್ನು ಸಲ್ಲಿಸಿದ್ದೀರಾ ಎಂದು ತಿವಾರಿ ಅವರನ್ನು ನ್ಯಾಯಪೀಠ ಕೇಳಿತು. ಇದುವರೆಗೆ ಎಂಟರಿಂದ 10 ಅರ್ಜಿಗಳನ್ನು ಸಲ್ಲಿಸಿರುವುದಾಗಿ ಅವರು ತಿಳಿಸಿದಾಗ ಪೀಠವು ತ್ವರಿತಗತಿಯಲ್ಲಿ ಅರ್ಜಿಯನ್ನು ವಜಾಗೊಳಿಸಿತು. ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸಿಜೆಐ ಹೇಳಿದರು.