ಲಖನೌ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಬಹುಕೋಟಿ ಬಿಟ್‌ಕಾಯಿನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಸೆಲೆಬ್ರಿಟಿ ಕೇಶ ವಿನ್ಯಾಸಕ ಜಾವೇದ್ ಹಬೀಬ್ ಹಾಗೂ ಅವರ ಪುತ್ರ ಅನೋಸ್ ಹಬೀಬ್ ವಿರುದ್ಧ 32 ಎಫ್‌ಐಆರ್‌ಗಳು ದಾಖಲಾಗಿವೆ.
ಹಬೀಬ್ ಮತ್ತು ಅವರ ಕುಟುಂಬ ದೇಶ ತೊರೆಯದಂತೆ ತಡೆಯಲು ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ. ಆದಾಗ್ಯೂ, ಕೇಶ ವಿನ್ಯಾಸಕನ ಪರ ವಕೀಲ ಪವನ್ ಕುಮಾರ್ ಅವರು ಭಾನುವಾರ ಸ್ಥಳೀಯ ಪೊಲೀಸರನ್ನು ಭೇಟಿಯಾಗಿ ತಮ್ಮ ಕಕ್ಷಿದಾರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಉಲ್ಲೇಖಿಸಿ ದಾಖಲೆಗಳನ್ನು ಸಲ್ಲಿಸಿದರು.
ಆದರೆ ಹಬೀಬ್ ವೈಯಕ್ತಿಕವಾಗಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಬೇಕಾಗುತ್ತದೆ ಎಂದು ಪೊಲೀಸರು ಕುಮಾರ್‌ಗೆ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಜಾವೇದ್ ಹಬೀಬ್, ಅವರ ಮಗ ಮತ್ತು ಸಹಚರರು ಬಿಟ್‌ಕಾಯಿನ್‌ನಲ್ಲಿ ಹಣ ಮಾಡಿದ್ರೆ ಹತ್ತು ಪಟ್ಟು ಆದಾಯದ ಭರವಸೆ ನೀಡಿ ಹಲವು ಹೂಡಿಕೆದಾರರಿಂದ ತಲಾ 5-7 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಫೋಲಿಕಲ್ ಗ್ಲೋಬಲ್ ಕಂಪನಿ(FLC) ಎಂಬ ಕಂಪನಿಯ ಬ್ಯಾನರ್ ಅಡಿಯಲ್ಲಿ ಹೂಡಿಕೆದಾರರಿಗೆ ಬಿಟ್‌ಕಾಯಿನ್ ಖರೀದಿಯ ಮೇಲೆ ವಾರ್ಷಿಕ ಶೇ 50-70ರಷ್ಟು ಲಾಭ ನೀಡುವ ಭರವಸೆ ನೀಡಿದ್ದರು.
ಸಂಭಾಲ್ ಎಸ್ಪಿ ಕೃಷ್ಣ ಕುಮಾರ್ ವಿಷ್ಣೋಯ್ ಅವರ ಪ್ರಕಾರ, ಹೆಚ್ಚಿನ ಲಾಭದ ಭರವಸೆ ನೀಡಿ, ವಿವಿಧ ಹೂಡಿಕೆದಾರರಿಂದ ತಲಾ 5-7 ಲಕ್ಷ ರೂ. ಪಡೆದು ಎರಡು ವರ್ಷಗಳಾದರೂ, ಹೂಡಿಕೆದಾರರಿಗೆ ಹಬೀಬ್ಸ್ ಯಾವುದೇ ಲಾಭ ನೀಡಲು ವಿಫಲರಾಗಿದ್ದಾರೆ.
ಆರಂಭಿಕ ತನಿಖೆಯಲ್ಲಿ ಮೂವರು ಆರೋಪಿಗಳು ಸುಮಾರು 5-7 ಕೋಟಿ ರೂ.ಗಳ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವಿವರವಾದ ತನಿಖೆಯ ನಂತರ, ಜಾವೇದ್ ಹಬೀಬ್, ಅವರ ಮಗ ಅನೋಸ್ ಮತ್ತು ಸೈಫುಲ್ ಎಂಬ ಸಹಚರನ ವಿರುದ್ಧ 32 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.