ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೆ ವಿದೇಶಾಂಗ ಸಚಿವಾಲಯ ನಿನ್ನೆ ಇಬ್ಬರು ನಾಯಕರ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಾಗತಿಕ ಇಂಧನ ಅಸ್ಥಿರತೆಯ ನಡುವೆ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವತ್ತ ತನ್ನ ಇಂಧನ ಮೂಲ ನೀತಿಯು ನಿರಂತರವಾಗಿ ಗಮನಹರಿಸುತ್ತಿದೆ ಎಂದು ಸಚಿವಾಲಯ ಪುನರುಚ್ಚರಿಸಿದೆ.
"ನನ್ನ ಮಾಹಿತಿಯ ಪ್ರಕಾರ, ನಿನ್ನೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.
ಮೋದಿ ಮತ್ತು ಟ್ರಂಪ್ ನಡುವಿನ ಕೊನೆಯ ಫೋನ್ ಸಂಭಾಷಣೆ ಅಕ್ಟೋಬರ್ 9 ರಂದು ನಡೆಯಿತು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಬುಧವಾರ ತಮ್ಮ ಕಚೇರಿಯಿಂದ ಮಾತನಾಡಿದ ಟ್ರಂಪ್, ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ ಎಂದು ಹೇಳಿದ ನಂತರ ಈ ಸ್ಪಷ್ಟೀಕರಣ ಬಂದಿದೆ.
"ಭಾರತ ತೈಲ ಖರೀದಿಸುತ್ತಿದೆ ಎಂದು ನನಗೆ ಸಂತೋಷವಾಗಿರಲಿಲ್ಲ, ಮತ್ತು ಅವರು ಇಂದು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಭರವಸೆ ನೀಡಿದರು. ಅದು ಒಂದು ದೊಡ್ಡ ಹೆಜ್ಜೆ" ಎಂದು ಟ್ರಂಪ್ ಹೇಳಿದರು. "ಈಗ ನಾವು ಚೀನಾವನ್ನು ಅದೇ ಕೆಲಸವನ್ನು ಮಾಡುವಂತೆ ಮಾಡಬೇಕಾಗಿದೆ" ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
"ಭಾರತ ತೈಲ ಮತ್ತು ಅನಿಲದ ಗಮನಾರ್ಹ ಆಮದುದಾರ. ಅಸ್ಥಿರ ಇಂಧನ ಸನ್ನಿವೇಶದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಸ್ಥಿರ ಆದ್ಯತೆಯಾಗಿದೆ. ನಮ್ಮ ಆಮದು ನೀತಿಗಳು ಸಂಪೂರ್ಣವಾಗಿ ಈ ಉದ್ದೇಶದಿಂದಲೇ ಕಾರ್ಯನಿರ್ವಹಿಸುತ್ತವೆ" ಎಂದು ಜೈಸ್ವಾಲ್ ಗುರುವಾರ ಮೊದಲು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಅಮೆರಿಕದಿಂದ ತನ್ನ ಇಂಧನ ರಫ್ತನ್ನು ವಿಸ್ತರಿಸುತ್ತಿದೆ ಎಂದು ಅವರು ಗಮನಸೆಳೆದರು.
"ಯುಎಸ್‌ಗೆ ಸಂಬಂಧಿಸಿದಂತೆ, ನಾವು ಹಲವು ವರ್ಷಗಳಿಂದ ನಮ್ಮ ಇಂಧನ ಸಂಗ್ರಹಣೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ ದಶಕದಲ್ಲಿ ಇದು ಸ್ಥಿರವಾಗಿ ಪ್ರಗತಿ ಸಾಧಿಸಿದೆ. ಪ್ರಸ್ತುತ ಆಡಳಿತವು ಭಾರತದೊಂದಿಗೆ ಇಂಧನ ಸಹಕಾರವನ್ನು ಗಾಢವಾಗಿಸುವಲ್ಲಿ ಆಸಕ್ತಿ ತೋರಿಸಿದೆ. ಚರ್ಚೆಗಳು ನಡೆಯುತ್ತಿವೆ" ಎಂದು ಜೈಸ್ವಾಲ್ ಹೇಳಿದ್ದಾರೆ.
"ಸ್ಥಿರ ಇಂಧನ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಅವಳಿ ಗುರಿಗಳಾಗಿವೆ. ಇದರಲ್ಲಿ ನಮ್ಮ ಇಂಧನ ಮೂಲವನ್ನು ವಿಶಾಲ ಆಧಾರದ ಮೇಲೆ ಪಡೆಯುವುದು ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಪೂರೈಸಲು ಸೂಕ್ತವಾದಂತೆ ವೈವಿಧ್ಯಗೊಳಿಸುವ ಉದ್ದೇಶವೂ ಸೇರಿದೆ" ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಜಾಗತಿಕ ಏರಿಳಿತದ ನಡುವೆ ಸ್ಪರ್ಧಾತ್ಮಕ ಬೆಲೆ ನಿಗದಿಯನ್ನು ಉಲ್ಲೇಖಿಸಿ ಭಾರತ ಕಳೆದ ಎರಡು ವರ್ಷಗಳಲ್ಲಿ ರಷ್ಯಾದಿಂದ ತನ್ನ ತೈಲ ಆಮದುಗಳನ್ನು ಹೆಚ್ಚಿಸಿದೆ. ಈ ನಿರ್ಧಾರಗಳು ರಾಜಕೀಯ ಒತ್ತಡಕ್ಕಿಂತ ಹೆಚ್ಚಾಗಿ ಆರ್ಥಿಕ ಪರಿಗಣನೆಗಳನ್ನು ಆಧರಿಸಿವೆ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ.
ಟ್ರಂಪ್ ಆಡಳಿತ ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದ 25% ಹೆಚ್ಚುವರಿ ದಂಡವನ್ನು ಒಳಗೊಂಡಂತೆ ಪ್ರಮುಖ ಭಾರತೀಯ ಆಮದುಗಳ ಮೇಲೆ 50% ಸುಂಕವನ್ನು ವಿಧಿಸಿತ್ತು.