ಸೀತಾಪುರ: ಅಕ್ರಮ ಸಂಬಂಧ ಮುಂದುವರಿಸಲು ಸೋದರಳಿಯ ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯೊಳಗೆ ತನ್ನ ಮಣಿಕಟ್ಟನ್ನು ಸೀಳಿಕೊಂಡು ರಂಪ, ರಾದ್ದಾಂತ ಮಾಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.
ಅಂದಹಾಗೆ, ದೆಹಲಿ ಮೂಲದ ಮಹಿಳೆ ಪೂಜಾ ಮಿಶ್ರಾಗೆ ಲಲಿತ್ ಕುಮಾರ್ ಮಿಶ್ರಾ ಅವರೊಂದಿಗೆ ವಿವಾಹವಾಗಿದ್ದು, ಏಳು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ತನ್ನ ಗಂಡನ ಸಹೋದರಿಯ ಮಗ, ವಯಸ್ಸಿನಲ್ಲಿ ತನಗಿಂತ 15 ವರ್ಷ ಚಿಕ್ಕವನಾದ ಅಲೋಕ್ ಮಿಶ್ರಾ ಕುಟುಂಬದೊಂದಿಗೆ ಇದ್ದ ಸಮಯದಲ್ಲಿ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ.
ಈ ವಿಚಾರ ತಿಳಿದ ಲಲಿತ್ ಮಿಶ್ರಾ, ಅಲೋಕ್ ನನ್ನು ಅಲ್ಲಿಂದ ಕಳುಹಿಸಿದ್ದರು. ಆದರೆ ಪೂಜಾ ತನ್ನ ಮಕ್ಕಳನ್ನು ಬಿಟ್ಟು ಬರೇಲಿಗೆ ತೆರಳಿ, ಅಲ್ಲಿ ಅವನೊಂದಿಗೆ ಸುಮಾರು ಏಳು ತಿಂಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು .
ಪೂಜಾ ಮತ್ತು ಅಲೋಕ್ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ತನ್ನ ಸ್ವಗ್ರಾಮ ಸೀತಾಪುರಕ್ಕೆ ಪೂಜಾ ತೆರಳಿದಾಗ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದನ್ನು ಬಗೆಹರಿಸಲು ಪೊಲೀಸರು ಇಬ್ಬರನ್ನು ವಿಚಾರಣೆಗೆ ಕರೆದಿದ್ದರು. ಆಕೆಯೊಂದಿಗೆ ಒಟ್ಟಿಗೆ ವಾಸಿಸಲು ಇಷ್ಟವಿಲ್ಲ ಎಂದು ಅಲೋಕ್ ಹೇಳಿದಾಗ ಪೂಜಾ ಬ್ಲೇಡ್ ತೆಗೆದುಕೊಂಡು ಪೊಲೀಸ್ ಠಾಣೆಯೊಳಗೆ ತನ್ನ ಮಣಿಕಟ್ಟನ್ನು ಸೀಳಿಕೊಂಡಿದ್ದಾರೆ.
ಇದರಿಂದ ಪೊಲೀಸ್ ಠಾಣೆಯಲ್ಲಿದ್ದವರು ಭಯ ಭೀತರಾಗಿದ್ದು, ಪೂಜಾ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಗಂಭೀರ ಸ್ಥಿತಿ ಹಿನ್ನೆಲೆಯಲ್ಲಿ ಲಖನೌಗೆ ಸ್ಥಳಾಂತರಿಸಲಾಗಿದೆ.