ಮುಂಬೈ: ಮುಂಬೈನ ಪೊವೈ ಪ್ರದೇಶದಲ್ಲಿ ವ್ಯಕ್ತಿಯೋರ್ವ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಕನಿಷ್ಠ 20 ಮಕ್ಕಳನ್ನು ರಕ್ಷಿಸಲಾಗಿದೆ. ಘಟನೆಗೆ ಮೊದಲು ಬಿಡುಗಡೆಯಾದ ವೀಡಿಯೊ ಸಂದೇಶದಲ್ಲಿ ರೋಹಿತ್ ಆರ್ಯ ಎಂದು ಗುರುತಿಸಿಕೊಂಡಿದ್ದ ಶಂಕಿತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ವೀಡಿಯೊ ಪ್ರಸಾರವಾದ ನಂತರ ಪೊಲೀಸರು ಕ್ಷಿಪ್ರ ಪ್ರತಿಕ್ರಿಯೆ ನೀಡಿ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡ ಸ್ವಲ್ಪ ಸಮಯದ ನಂತರ ಅವರನ್ನು ಸುರಕ್ಷಿತವಾಗಿರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀಡಿಯೊದಲ್ಲಿ, ಅನಿರ್ದಿಷ್ಟ ಜನರೊಂದಿಗೆ ಸಂಭಾಷಣೆ ನಡೆಸಲು ಒತ್ತಾಯಿಸಲು ಆತ್ಮಹತ್ಯೆಯ ಬದಲು ಒತ್ತೆಯಾಳಾಗುವುದನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. "ನಾನು ರೋಹಿತ್ ಆರ್ಯ. ಆತ್ಮಹತ್ಯೆಯಿಂದ ಸಾಯುವ ಬದಲು, ನಾನು ಒಂದು ಯೋಜನೆಯನ್ನು ರೂಪಿಸಿದ್ದೇನೆ ಮತ್ತು ಇಲ್ಲಿ ಕೆಲವು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದೇನೆ" ಎಂದು ಆತ ಹೇಳಿದ್ದಾನೆ.
"ಸರಳ ಬೇಡಿಕೆಗಳು, ನೈತಿಕ ಬೇಡಿಕೆಗಳು ಮತ್ತು ಕೆಲವು ಪ್ರಶ್ನೆಗಳನ್ನು ತಾನು ಹೊಂದಿರುವುದಾಗಿ ಆತ ವಿವರಿಸಿದ್ದಾನೆ.
"ನಿಮ್ಮಿಂದ ಬರುವ ಸಣ್ಣದೊಂದು ತಪ್ಪು ನಡೆಯೂ ನನ್ನನ್ನು ಪ್ರಚೋದಿಸುತ್ತದೆ" ಎಂದು ಆತ ಎಚ್ಚರಿಸಿದ್ದ ಮತ್ತು ಸ್ಥಳಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ. ನಾನು ಹಣ ಕೇಳುವುದಿಲ್ಲ ಮತ್ತು "ಭಯೋತ್ಪಾದಕನಲ್ಲ" ಎಂದು ವಿಡಿಯೋದಲ್ಲಿ ಆತ ತಿಳಿಸಿದ್ದ.
"ನನಗೆ ಸರಳ ಸಂಭಾಷಣೆಗಳು ಬೇಕು, ಅದಕ್ಕಾಗಿಯೇ ನಾನು ಈ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದೇನೆ. ನಾನು ಅವರನ್ನು ಒಂದು ಯೋಜನೆಯ ಭಾಗವಾಗಿ ಒತ್ತೆಯಾಳಾಗಿ ಇರಿಸಿಕೊಂಡಿದ್ದೇನೆ. ನಾನು ಬದುಕಿದ್ದರೆ, ನಾನು ಅದನ್ನು ಮಾಡುತ್ತೇನೆ; ನಾನು ಸತ್ತರೆ, ಬೇರೆ ಯಾರಾದರೂ ಮಾಡುತ್ತಾರೆ, ಆದರೆ ಅದು ಖಂಡಿತವಾಗಿಯೂ ಸಂಭವಿಸುತ್ತದೆ ಏಕೆಂದರೆ ನಿಮ್ಮ ಸಣ್ಣದೊಂದು ತಪ್ಪು ನಡೆಯೂ ಸಹ ನಾನು ಈ ಇಡೀ ಸ್ಥಳಕ್ಕೆ ಬೆಂಕಿ ಹಚ್ಚಿ ಅದರಲ್ಲಿ ಸಾಯುವಂತೆ ಮಾಡುತ್ತದೆ" ಎಂದು ಆರ್ಯ ವೀಡಿಯೊದಲ್ಲಿ ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮಕ್ಕಳು ಪೊವೈನಲ್ಲಿರುವ ಕಟ್ಟಡವೊಂದರ ನೆಲ ಮಹಡಿಯಲ್ಲಿರುವ ಆರ್‌ಎ ಸ್ಟುಡಿಯೋಗೆ ಚಲನಚಿತ್ರ ಆಡಿಷನ್‌ಗಾಗಿ ಬಂದಿದ್ದರು. ಪೊಲೀಸರು ಸ್ಥಳದಿಂದ ಏರ್ ಗನ್ ಮತ್ತು ಕೆಲವು ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ.