ಹೈದರಾಬಾದ್: ರಾಷ್ಟ್ರವ್ಯಾಪಿ ಗಮನ ಸೆಳೆಯುವ ಜನಪ್ರಿಯ 'ಬಾಲಾಪುರ ಗಣೇಶ ಲಡ್ಡು'ವನ್ನು ಇಂದು ಬಹಿರಂಗ ಹರಾಜಿನಲ್ಲಿ ಕರ್ಮನ್‌ಘಾಟ್‌ನ ಲಿಂಗಲ ದಶರತ್ ಗೌಡ್ ಅವರು 35 ಲಕ್ಷ ರೂಪಾಯಿಗೆ ಖರೀದಿಸಿದರು. ಇದು ಕಳೆದ 31 ವರ್ಷಗಳಲ್ಲಿ ನಡೆದ ಹರಾಜಿನಲ್ಲಿ ಅತ್ಯಧಿಕ ಮೊತ್ತವಾಗಿದೆ. ಹರಾಜಿನ ಮೊತ್ತವನ್ನು ಸ್ಥಳದಲ್ಲೇ ಪಾವತಿಸಲಾಯಿತು. ಸಮಿತಿಯು 1994 ರಿಂದ ಹರಾಜನ್ನು ಆಯೋಜಿಸುತ್ತಿದೆ.
ಕಳೆದ ಮೂರು ದಶಕಗಳಲ್ಲಿ, ಬಾಲಾಪುರ ಲಡ್ಡು ಸರಳ ಪ್ರಸಾದದಿಂದ ಸಾಮೂಹಿಕ ನಂಬಿಕೆಯ ಸಂಕೇತವಾಗಿ ಬೆಳೆದಿದೆ, ಹರಾಜಿನಲ್ಲಿ ಖರೀದಿಯಾಗುವ ಬೆಲೆಗಳು ಪ್ರತಿ ವರ್ಷವೂ ಏರಿಕೆಯಾಗುತ್ತಿದೆ. ಕಳೆದ ವರ್ಷವು ಕೆ. ಶಂಕರ್ ರೆಡ್ಡಿ ಲಡ್ಡುವನ್ನು 30.01 ಲಕ್ಷ ರೂಪಾಯಿಗೆ ಖರೀದಿಸಿದ್ದರು.
ಕಳೆದ ವರ್ಷ ಹೊಸ ನಿಯಮವನ್ನು ಜಾರಿಗೆ ತರಲಾಯಿತು, ಇದರಲ್ಲಿ ಹರಾಜಿನಲ್ಲಿ ಭಾಗವಹಿಸುವವರು ಹಿಂದಿನ ವರ್ಷದ ಹರಾಜು ಬೆಲೆಗೆ ಸಮಾನವಾದ ಮೊತ್ತವನ್ನು ಠೇವಣಿ ಇಡಬೇಕು. ಈ ವರ್ಷ ಒಟ್ಟು ಏಳು ಜನರು 30.01 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿ ನೋಂದಾಯಿಸಿಕೊಂಡಿದ್ದಾರೆ.
ಕಳೆದ ವರ್ಷದವರೆಗೆ, ಸ್ಥಳೀಯರಿಗೆ ಮೊತ್ತವನ್ನು ಪಾವತಿಸಲು ಒಂದು ವರ್ಷದ ಸಮಯವನ್ನು ನೀಡಲಾಗಿತ್ತು ಆದರೆ ಹೊರಗಿನವರು ಮಾತ್ರ ಮುಂಗಡ ಠೇವಣಿ ನಿಯಮವನ್ನು ಅನುಸರಿಸಬೇಕಾಗಿತ್ತು.
ಲಡ್ಡು ಬೆಲೆ ಸುಲಭವಾಗಿ 40 ಲಕ್ಷ ರೂಪಾಯಿ ಮೀರಬಹುದಾಗಿದ್ದರೂ, ಬಾಲಾಪುರ ಗಣೇಶ ಉತ್ಸವ ಸಮಿತಿ ಸದಸ್ಯರು ಬಿಡ್ಡಿಂಗ್ ನ್ನು ಮೊದಲೇ ಕಡಿತಗೊಳಿಸಿ ವಿಜೇತರನ್ನು ಘೋಷಿಸಿದರು. ಸಮಿತಿಯು ಪ್ರತಿ ವರ್ಷ ಲಡ್ಡು ಹರಾಜಿನ ಗರಿಷ್ಠ ಮಿತಿಯನ್ನು ಹಿಂದಿನ ವರ್ಷದ ಬೆಲೆಗಿಂತ 3-5 ಲಕ್ಷ ರೂಪಾಯಿ ಹೆಚ್ಚು ಕಾಯ್ದುಕೊಳ್ಳುತ್ತಿದೆ. ಹರಾಜಿನಲ್ಲಿ ಸುಮಾರು 10-20 ಲಕ್ಷ ರೂಪಾಯಿ ಅಸಹಜ ಏರಿಕೆ ಕಂಡುಬಂದರೆ, ಮುಂದಿನ ವರ್ಷದ ಹರಾಜಿನಲ್ಲಿ ಅದರ ಪರಿಣಾಮ ಬೀರಬಹುದು,
ಕಳೆದ 4-5 ವರ್ಷಗಳಲ್ಲಿ, 2-4 ಲಕ್ಷ ರೂಪಾಯಿ ಹೆಚ್ಚಳದ ನಂತರ, ಸಮಿತಿಯು ಇತರ ಬಿಡ್ ದಾರರಿಗೆ ಅವಕಾಶ ನೀಡದೆ ವಿಜೇತರ ಹೆಸರನ್ನು ತ್ವರಿತವಾಗಿ ಘೋಷಿಸುತ್ತದೆ.
ಹೈದರಾಬಾದ್ ಹೊರವಲಯದಲ್ಲಿರುವ ಬಾಲಾಪುರದಿಂದ ನಡೆಯುವ ಕೇಂದ್ರೀಕೃತ ಗಣೇಶ ವಿಸರ್ಜನಾ ಮೆರವಣಿಗೆಯ ಆರಂಭವನ್ನು ಲಡ್ಡು ಹರಾಜು ಸೂಚಿಸುತ್ತದೆ.
ಬಹುಮಹಡಿ ಅಪಾರ್ಟ್‌ಮೆಂಟ್‌ಗಳ ಮೇಲ್ಛಾವಣಿಯಲ್ಲಿ ನೆರೆದಿದ್ದ ಮತ್ತು ಸ್ಥಳೀಯ ಜನಸಮೂಹದ ಸಮ್ಮುಖದಲ್ಲಿ ಬಹಿರಂಗ ಹರಾಜನ್ನು ನಡೆಸಲಾಯಿತು. ಬೆಳಿಗ್ಗೆ 10.45 ರ ಸುಮಾರಿಗೆ ಬಾಲಾಪುರ ದೇವಸ್ಥಾನದಲ್ಲಿ ಲಡ್ಡುವಿನ ಹರಾಜನ್ನು ನಡೆಸಲಾಯಿತು ಮತ್ತು 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಂಡಿತು.
ನೂರಾರು ಭಕ್ತರ ಗಣಪತಿ ಬಪ್ಪಾ ಮೋರಿಯಾ ಕೂಗಿನ ನಡುವೆ ಹರಾಜು ನಡೆಯಿತು. ಬಹಿರಂಗ ಹರಾಜಿನಲ್ಲಿ ಭಾಗವಹಿಸಿದವರು ಲಡ್ಡುವಿಗೆ ಬಿಡ್ ಮಾಡಿದರು. 21 ಕಿಲೋಗ್ರಾಂಗಳಷ್ಟು ತೂಕದ ಲಡ್ಡನ್ನು ಚಿನ್ನದ ಹಾಳೆಯಿಂದ ಮುಚ್ಚಿದ ಎರಡು ಕಿಲೋಗ್ರಾಂಗಳಷ್ಟು ಶುದ್ಧ ಬೆಳ್ಳಿಯ ಬಟ್ಟಲಿನಲ್ಲಿ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾಯಿತು.
ಹರಾಜಿನ ಮೊತ್ತವನ್ನು ದೇವಾಲಯ ಮತ್ತು ಗ್ರಾಮ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳಿಗೆ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಖರ್ಚು ಮಾಡಲಾಗುವುದು ಎಂದು ಬಿಜಿಯುಎಸ್ ಸದಸ್ಯರು ಟಿಎನ್‌ಐಇಗೆ ತಿಳಿಸಿದರು. ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಕೆಲವು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ಪ್ರತಿ ವರ್ಷವೂ ಲಡ್ಡುವಿನ ಜನಪ್ರಿಯತೆ ಹೆಚ್ಚುತ್ತಿದೆ. ವಿಜೇತರಿಗೆ ಪವಿತ್ರವೆಂದು ನಂಬಲಾದ ಬಾಲಾಪುರ ಲಡ್ಡು ಕಳೆದ ಮೂರು ದಶಕಗಳಿಂದ ಗಣೇಶ ಹಬ್ಬದ ಸಂದರ್ಭದಲ್ಲಿ ಆಕರ್ಷಣೆಯ ಕೇಂದ್ರವಾಗಿದೆ.