ನವದೆಹಲಿ: ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು(MAMC) ಮತ್ತು ಮುಖ್ಯಮಂತ್ರಿ ಸಚಿವಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಮಂಗಳವಾರ ಬೆದರಿಕೆ ಇಮೇಲ್ ಬಂದಿದ್ದು, ಅಧಿಕಾರಿಗಳು ಎರಡೂ ಆವರಣಗಳನ್ನು ಪರಿಶೀಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಂಗಳವಾರ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ(MAMC) ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಅದರಲ್ಲಿ ಮಧ್ಯಾಹ್ನ 2.45 ಕ್ಕೆ MAMC ಮತ್ತು ಮಧ್ಯಾಹ್ನ 3.30 ಕ್ಕೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆದರಿಕೆ ಸ್ವೀಕರಿಸಿದ ನಂತರ, ತಕ್ಷಣ ಬಾಂಬ್ ಪತ್ತೆ ಮತ್ತು ವಿಲೇವಾರಿ ತಂಡಗಳು(BDDS/BDT) ಸ್ಥಳಕ್ಕೆ ಆಗಮಿಸಿದ್ದು, ಪ್ರಸ್ತುತ MAMC ಮತ್ತು ಸಚಿವಾಲಯದ ಆವರಣದಲ್ಲಿ ಸಂಪೂರ್ಣ ಪರಿಶೀಲನೆ ಮತ್ತು ಸ್ಕ್ಯಾನ್ ನಡೆಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡೂ ಸ್ಥಳಗಳಲ್ಲಿ ಇರುವ ಎಲ್ಲ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಬೆದರಿಕೆ ಇಮೇಲ್‌ನ ಮೂಲ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಡಿಡಿಎಂಎ, ಸಂಚಾರ ಪೊಲೀಸರು ಮತ್ತು ವಿಶೇಷ ಘಟಕಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.