ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಕುರಿತು ನಿಂದನಾತ್ಮಕ ಎಐ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆದಿದೆ.
ವಿಡಿಯೋದಲ್ಲಿ ಪ್ರಧಾನಿ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಮೋದಿ ಹೋಲುವ ದೃಶ್ಯ ಸೃಷ್ಟಿಸಲಾಗಿದ್ದು, ವಿಡಿಯೋದಲ್ಲಿ ಸ್ವಂತ ಮಗನೇ ತಮ್ಮನ್ನು ರಾಜಕೀಯಕ್ಕೆ ಎಳೆದು ತಂದಿರುವುದಕ್ಕೆ ಹೀರಾಬೆನ್ ಅವರು ದುಃಖ ವ್ಯಕ್ತಪಡಿಸುತ್ತಿರುವುದಾಗಿ ತೋರಿಸಲಾಗಿದೆ. ಈ ವಿಡಿಯೋವನ್ನು ಬಿಹಾರ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ.
ಈ ವಿಡಿಯೋ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿಯನ್ನು ಮತ್ತೊಮ್ಮೆ ಅವಮಾನಿಸಿದೆ ಎಂದು ಆರೋಪಿಸಿದೆ.
ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತು ಇತರ ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮೋದಿಯವರ ದಿವಂಗತ ತಾಯಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರು ನಾಚಿಕೆಯಿಲ್ಲದವರಾಗಿದ್ದು, ಮಹಿಳೆಯರ ಬಗ್ಗೆ ಅವರಿಗೆ ಗೌರವವಿಲ್ಲ ಎಂದು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಬಿಹಾರ ರಾಜ್ಯಕ್ಕೆ ಭೇಟಿ ನೀಡುವ ಒಂದು ದಿನ ಮೊದಲು ಕಾಂಗ್ರೆಸ್ ಎಐ ಆಧಾರಿತ ವಿಡಿಯೋವನ್ನು ಹಂಚಿಕೊಂಡಿದೆ.
ಬಿಹಾರ ರಾಜ್ಯಕ್ಕೆ ಭೇಟಿ ನೀಡಲಿರುವ ಮೋದಿಯವರು, ಪೂರ್ಣಿಯಾ ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಸರ್ಕಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರ್ಯಾಲಿಯಲ್ಲಿ ಕಾಂಗ್ರೆಸ್ ಮಾಡಿರುವ ಅವಮಾನದ ಕುರಿತು ಪ್ರಧಾನಿ ಮೋದಿಯವರು ಏನು ಹೇಳುತ್ತಾರೋ ಕಾದು ನೋಡೋಣ. ಇಂತಹ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ತನ್ನನ್ನು ತಾನು ಅಪಹಾಸ್ಯ ಮಾಡಿಕೊಂಡಿದೆ. ಇದೇ ವಿಡಿಯೋ ಹಿಡಿದು ಬಿಹಾರದ ಜನತಾ ನ್ಯಾಯಾಲವಯ ಮುಂದೆ ಹೋಗಲಾಗುತ್ತದೆ ಎಂದು ಬಿಹಾರದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಬಿಹಾರದ ಬಿಜೆಪಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಶಹನವಾಜ್ ಹುಸೇನ್ ಕೂಡ ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ.