ಮೊರಾದಾಬಾದ್: ಇತ್ತೀಚಿಗೆ ಮಕ್ಕಳಲ್ಲಿ ಆತ್ಮಹತ್ಯೆ ಪಿಡುಗು ಹೆಚ್ಚಾಗುತ್ತಿದೆ. ತಾಯಿ ಬೈದಿದ್ದಕ್ಕೆ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು 6ನೇ ತರಗತಿ ವಿದ್ಯಾರ್ಥಿ ಕೃಷ್ಣ ಎಂದು ಗುರುತಿಸಲಾಗಿದೆ.
ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಬಾಲಕನ ತಾಯಿ ಕಾರ್ಖಾನೆಯೊಂದಕ್ಕೆ ಕೆಲಸಕ್ಕೆ ತೆರಳುವ ಮುನ್ನ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಆತನನ್ನು ಗದರಿಸಿ ಕೊಠಡಿಯೊಂದರಲ್ಲಿ ಕೂಡಿಹಾಕಿದ್ದಾಳೆ.
ಬಳಿಕ ಸಂಜೆ ಮನೆಗೆ ಹಿಂತಿರುಗಿ ನೋಡಿದಾಗ ಮಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.
ಒಬ್ಬನೇ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಿಶಾ, ತನ್ನ ಪತಿ ಸುನೀಲ್ ಮದ್ಯವ್ಯಸನಿಯಾಗಿದ್ದು, ಇತ್ತೀಚೆಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಎಂದು ವಿವರಿಸಿದ್ದಾರೆ. ಈ ಹಿಂದೆ ತನ್ನ ತಂದೆಯ ಹಿಂಸಾತ್ಮಕ ವರ್ತನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೃಷ್ಣ ಬೆದರಿಕೆ ಹಾಕಿದ್ದ ಎಂದು ನಿಶಾ ಪೊಲೀಸರಿಗೆ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದುವರೆಗೆ ಯಾರ ವಿರುದ್ಧವೂ ಪೊಲೀಸ್ ವರದಿ ದಾಖಲಾಗಿಲ್ಲ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ದೇವೇಂದ್ರ ಸಿಂಗ್ ಹೇಳಿದ್ದಾರೆ.