ನವದೆಹಲಿ: ವಿಷ್ಣುವಿನ ವಿಗ್ರಹ ಪುನರ್ನಿರ್ಮಾಣಕ್ಕೆ ಸಂಬಂಧಿಸಿದ ವಿಷಯದಲ್ಲಿ ತಮ್ಮ ಹೇಳಿಕೆಗೆ ಆನ್‌ಲೈನ್‌ನಲ್ಲಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಬಿ ಆರ್ ಗವಾಯಿ ಅವರು, "ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ" ಎಂದು ಗುರುವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ಖಜುರಾಹೊ ದೇವಾಲಯ ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಜೆಐ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠ ಮೇ 16 ರಂದು ವಜಾಗೊಳಿಸಿತ್ತು.
ಈ ಅರ್ಜಿಯನ್ನು ಪ್ರಚಾರ ಹಿತಾಸಕ್ತಿ ಹೊಂದಿರುವ ಮೊಕದ್ದಮೆ ಎಂದು ಕರೆದ ಸಿಜೆಐ, "ಇದು ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿ ಹೊಂದಿರುವ ಮೊಕದ್ದಮೆ. ಹೋಗಿ ದೇವರನ್ನೇ ಏನಾದರೂ ಮಾಡಲು ಕೇಳಿ. ನೀವು ವಿಷ್ಣುವಿನ ಬಲವಾದ ಭಕ್ತ ಎಂದು ಹೇಳುತ್ತಿದ್ದೀರಿ, ನೀವು ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ" ಎಂದು ಅರ್ಜಿ ವಜಾಗೊಳಿಸಿದ್ದರು.
ಛತ್ತರ್ಪುರ್ ಜಿಲ್ಲೆಯ ಜವಾರಿ ದೇವಸ್ಥಾನದಲ್ಲಿ ಹಾನಿಗೊಳಗಾದ ವಿಗ್ರಹವನ್ನು ಬದಲಾಯಿಸಲು ಮತ್ತು ಪ್ರತಿಷ್ಠಾಪಿಸಲು ಕೋರಿ ರಾಕೇಶ್ ದಲಾಲ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಪೀಠ ನಿರಾಕರಿಸಿತ್ತು.
ಸಿಜೆಐ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವಿಮರ್ಶಾತ್ಮಕ ಪೋಸ್ಟ್‌ಗಳಿಗೆ ಕಾರಣವಾಯಿತು.
ಖಜುರಾಹೊದಲ್ಲಿರುವ ವಿಷ್ಣು ವಿಗ್ರಹದ ಬಗ್ಗೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಸಿಜೆಐ ಹೇಳಿದಾಗ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕಳೆದ 10 ವರ್ಷಗಳಿಂದ ಸಿಜೆಐ ಅವರ ಬಗ್ಗೆ ಗೊತ್ತು. ನ್ಯಾಯಮೂರ್ತಿ ಗವಾಯಿ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಸಮಾನ ಭಕ್ತಿಯಿಂದ ಭೇಟಿ ನೀಡುತ್ತಾರೆ ಮತ್ತು ಯಾವುದೇ ದೇವರನ್ನು ಅವಮಾನಿಸುವ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದರು. "ಕಳೆದ 10 ವರ್ಷಗಳಿಂದ ನನಗೆ ಸಿಜೆಐ ಅವರ ಪರಿಚಯವಿದೆ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.