ಮುಂಬೈ: ಮಹಾರಾಷ್ಟ್ರದ ಮಹಿಳೆಯೊಬ್ಬರು ತನ್ನ ಮೊಬೈಲ್ ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ ಬಸ್ ಚಾಲಕನನ್ನು ಪತ್ತೆಹಚ್ಚಿ, ಆತನಿಗೆ ನಡುರಸ್ತೆಯಲ್ಲೇ ಕಪಾಳಮೋಕ್ಷ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಖಾಸಗಿ ಬಸ್ ಚಾಲಕನೊಬ್ಬ ಟಿಕೆಟ್ ಬುಕಿಂಗ್ ದಾಖಲೆಯಿಂದ ತೆಗೆದ ಸಂಪರ್ಕ ವಿವರಗಳನ್ನು ಬಳಸಿಕೊಂಡು ಫೋನ್‌ಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾನೆ ಎಂಬ ಆರೋಪದ ಮೇಲೆ ಸಾರ್ವಜನಿಕವಾಗಿ ಆತನನ್ನು ಹಿಡಿದು ಥಳಿಸಲಾಗಿದೆ.
ಮೂಲಗಳ ಪ್ರಕಾರ ಆ ಮಹಿಳೆ ಕೆಲವು ತಿಂಗಳ ಹಿಂದೆ ಕಂಕವ್ಲಿಯಲ್ಲಿರುವ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದರು. ಈ ವೇಳೆ ಪ್ರಯಾಣ ಕಂಪನಿಯ ಕಚೇರಿಯ ಮೂಲಕ ಟಿಕೆಟ್ ಬುಕ್ ಮಾಡಿದ್ದಳು. ಕಂಕವ್ಲಿ ಮತ್ತು ಮುಂಬೈ ನಡುವಿನ ಪ್ರಯಾಣಕ್ಕಾಗಿ ಅವಳು ಆಗಾಗ್ಗೆ ಅದೇ ಕಂಪನಿಯ ಬಸ್ ಸೇವೆಯನ್ನು ಬಳಸುತ್ತಿದ್ದಳು.
ಇದನ್ನೇ ದುರುಪಯೋಗ ಪಡಿಸಿಕೊಂಡ ಚಾಲಕ ಟಿಕೆಟ್ ಬುಕಿಂಗ್ ದಾಖಲೆಗಳಿಂದ ಆಕೆಯ ಮೊಬೈಲ್ ಸಂಖ್ಯೆಯನ್ನು ಪಡೆದು ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ಅವಳಿಗೆ ಅಶ್ಲೀಲ ವೀಡಿಯೊಗಳನ್ನು ಕಳುಹಿಸಲು ಪ್ರಾರಂಭಿಸಿದ್ದ. ಆತನ ಈ ಕೃತ್ಯ ಪುನರಾವರ್ತಿಸಿದ ನಂತರ, ಮಹಿಳೆ ಕ್ರಮ ಕೈಗೊಳ್ಳಲು ನಿರ್ಧರಿಸಿದಳು.
ಸೆಪ್ಟೆಂಬರ್ 16 ರ ಸಂಜೆ, ಅವಳು ಕಂಕವ್ಲಿ ಬಸ್ ನಿಲ್ದಾಣದ ಬಳಿಯ ಕಂಪನಿಯ ಬುಕಿಂಗ್ ಕಚೇರಿಗೆ ಬಂದಳು. ಅವಳೊಂದಿಗೆ ಇನ್ನೊಬ್ಬ ಮಹಿಳೆಯೂ ಇದ್ದಳು. ಚಾಲಕನನ್ನು ಪತ್ತೆ ಮಾಡಿ ಪ್ರಶ್ನಿಸಿದ್ದಾಳೆ. ಬಳಿಕ ಆತನನ್ನು ನಿಂದಿಸಿ ಕಪಾಳ ಮೋಕ್ಷ ಮಾಡಿದ್ದಾಳೆ. ತನ್ನ ಫೋನ್‌ನಲ್ಲಿದ್ದ ಆತ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ತೋರಿಸಿ, ಅವನಿಗೆ ಹಲವಾರು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ.