ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಪತನದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ಸೋಮವಾರ ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ಕ್ಯಾಪ್ಟನ್ ಅಮಿತ್ ಸಿಂಗ್ ನೇತೃತ್ವದ ವಾಯುಯಾನ ಸುರಕ್ಷತಾ ಸಂಸ್ಥೆಯಾದ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಅಪಘಾತಕ್ಕೆ ಪೈಲಟ್‌ಗಳನ್ನು 'ದೂಷಿಸುವ' ವರದಿಗಳನ್ನು ಎತ್ತಿ ತೋರಿಸಿದರು. ಅರ್ಜಿದಾರರು ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸುವುದು 'ತಾರ್ಕಿಕ' ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು.
ವಿಮಾನ ಅಪಘಾತದ ಬಗ್ಗೆ ಡಿಜಿಸಿಎ ನಡೆಸಿದ ಪ್ರಾಥಮಿಕ ತನಿಖಾ ವರದಿಯನ್ನು ಆಧರಿಸಿ, ಅಪಘಾತಕ್ಕೆ ಪೈಲಟ್ ದೋಷ ಕಾರಣ ಎಂಬ ನಿರೂಪಣೆ ಚಾಲ್ತಿಯಲ್ಲಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು ಮತ್ತು ಈ ನಿರೂಪಣೆ "ದುರದೃಷ್ಟಕರ" ಎಂದು ಟೀಕಿಸಿದೆ.
ಈ ಘಟನೆಯನ್ನು "ದುರದೃಷ್ಟಕರ ಮತ್ತು ಆಯ್ದ ಮಾಹಿತಿಯನ್ನು ಸೋರಿಕೆ ಮಾಡುವುದು ಬೇಜವಾಬ್ದಾರಿ. 'ತಾರ್ಕಿಕ' ತೀರ್ಮಾನಕ್ಕೆ ತೆಗೆದುಕೊಳ್ಳುವವರೆಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು" ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA)ಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್, ತನಿಖಾ ಬ್ಯುರೋ ಪ್ರಕಟಿಸಿದ ಪ್ರಾಥಮಿಕ ವರಿಯಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ನಡುವಿನ ಸಂಭಾಷಣೆಯನ್ನು ಉಲ್ಲೇಖಿಸಿರುವುದಕ್ಕೆ ವಿವರಣೆ ಕೇಳಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ ವರದಿಯಲ್ಲಿ ಇಬ್ಬರೂ ಪೈಲಟ್‌ಗಳ ಸಂಭಾಷಣೆ ವಿವರಗಳನ್ನು ಉಲ್ಲೇಖಿಸಲಾಗಿತ್ತು. ಇದರಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರು "ನೀವು ಏಕೆ ತೈಲ ಸಂಪರ್ಕ ಕಡಿತಗೊಳಿಸಿದ್ದೀರಿ?" ಎಂದು ಕೇಳಿದ್ದು, ಕ್ಲೈವ್ ಕುಂದರ್ ಅವರು "ನಾನು ಹಾಗೆ ಮಾಡಿಲ್ಲ" ಎಂದು ಉತ್ತರಿಸಿರುವುದನ್ನು ಸೇರಿಸಲಾಗಿತ್ತು. ಇದು ವಿಮಾನ ದುರಂತದಲ್ಲಿ ಪೈಲಟ್‌ಗಳ ಕೈವಾಡ ಇದೆ ಎಂಬ ಶಂಕೆ ಮೂಡಲು ಕಾರಣವಾಗಿತ್ತು.