ಅಹಮದಾಬಾದ್: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ ಬ್ಯೂಟಿ ಪಾರ್ಲರ್ ನಲ್ಲೇ ಪತ್ನಿ ಮತ್ತು ಅತ್ತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್‌ನ ಅಹಮದಾಬಾದ್‌ನ ಕುಬೇರ್‌ನಗರದಲ್ಲಿರುವ ಉಷಾ ಬ್ಯೂಟಿ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದ್ದು, ಪತ್ನಿಜಯಬೆನ್ ಕೆಲಸ ಮಾಡುತ್ತಿದ್ದ ಬ್ಯೂಟಿ ಪಾರ್ಲರ್ ಗೆ ಬಂದ ಪತಿರಾಯ ಅಶೋಕ್ ಬಾಬುಭಾಯ್ ಆಕೆಯೊಂದಿಗೆ ಮಾತುಕತೆ ನಡೆಸಿದ್ದ.
ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಜಗಳ ತಾರಕಕ್ಕೇರುತ್ತಲೇ ಪತ್ನಿಯ ತಾಯಿ ಶೋಭನಾಬೆನ್ ಕೂಡ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ತಾಯಿ ಶೋಭನಾಬೆನ್ ಕೂಡ ಆರೋಪಿಯೊಂದಿಗೆ ಜಗಳಕ್ಕಿಳಿದಿದ್ದು ಇದರಿಂದ ಆಕ್ರೋಶಗೊಂಡ ಪತಿ ಅಶೋಕ್ ತಾನು ತಂದಿದ್ದ ಪೆಟ್ರೋಲ್ ಅನ್ನು ಇಬ್ಬರ ಮೇಲೂ ಸುರಿದು ಬೆಂಕಿ ಹಚ್ಚಿದ್ದಾನೆ.
ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ ಪತ್ನಿ ಜಯಬೆನ್ ಸಾವನ್ನಪ್ಪಿದ್ದರೆ, ಶೇ.70ರಷ್ಚು ಸುಟ್ಟಗಾಯಗಳೊಂದಿಗೆ ಅತ್ತೆ ಶೋಭನಾಬೆನ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯ ಜಿ-8 ಐಸಿಯು ವಾರ್ಡ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅಂತೆಯೇ ಇದೇ ವೇಳೆ ಆರೋಪಿ ಅಶೋಕ್ ಗೂ ಗಾಯಗಳಾಗಿದ್ದು ಆತನನ್ನು ಪೊಲೀಸ್ ಭದ್ರತೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜಯಬೆನ್ ಅವರ ಸಹೋದರ ನೀಲೇಶ್ ಧರ್ಮದಾಸ್ ಈ ಘಟನೆಗೆ ಸಂಬಂಧಿಸಿದಂತೆ ಸರ್ದಾರ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿ
ಜಯಾಬೆನ್ ಸಹೋದರ ದೂರಿನಲ್ಲಿ ಉಲ್ಲೇಖಿಸಿರುವಂತೆ ಜಯಬೆನ್ ಮತ್ತು ಅಶೋಕ್ ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಮದುವೆಯಾದಾಗಿನಿಂದ ಅವರು ಆಗಾಗ್ಗೆ ಜಗಳವಾಡುತ್ತಿದ್ದರು, ಇದರಿಂದಾಗಿ ಜಯಬೆನ್ ಅಶೋಕ್ ಮನೆ ಬಿಟ್ಟು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಜಯಬೆನ್ ತನ್ನ ಚಿಕ್ಕಮ್ಮ ಉಷಾಬೆನ್ ಖೇರಾಜ್ಮಲ್ ರೆಡ್ಹಾನಿಯ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು.
ನೀಲೇಶ್ ಗಾಂಧಿನಗರದಿಂದ ಅಹಮದಾಬಾದ್‌ಗೆ ತನ್ನ ಚಿಕ್ಕಪ್ಪನ ಕಾರನ್ನು ಚಲಾಯಿಸುತ್ತಿದ್ದಾಗ ಅವರ ಚಿಕ್ಕಪ್ಪ ರಾಜೇಶ್‌ಭಾಯ್ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ತಕ್ಷಣ, ನೀಲೇಶ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಈ ವೇಳೆಗಾಗಲೇ ಅಲ್ಲಿ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುತ್ತಿದ್ದರು ಎಂದು ಹೇಳಿದ್ದಾರೆ.
ಘಟನೆಯ ನಂತರ, ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109(1), 326(g), ಮತ್ತು 333 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.