ನವದೆಹಲಿ: ರಾಜಧಾನಿ ದೆಹಲಿಯ ಪ್ರತಿಷ್ಠಿತ ನಿರ್ವಹಣಾ ಸಂಸ್ಥೆಯೊಂದರಲ್ಲಿ ಹಲವಾರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಸ್ವಯಂ ಘೋಷಿತ ದೇವಮಾನವ, ಪಾರ್ಥ ಸಾರಥಿ ಎಂದು ಕರೆಯಲ್ಪಡುವ ಸ್ವಾಮಿ ಚೈತನ್ಯಾನಂದ ಸರಸ್ವತಿ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.
ಆಗಸ್ಟ್ 4 ರಂದು ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಔಪಚಾರಿಕ ದೂರಿನ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನ ನಿರ್ವಹಣಾ ಸಮಿತಿಯ ಸದಸ್ಯ ಎಂದು ನಂಬಲಾದ ಆರೋಪಿಯು ಈ ಪ್ರಕರಣ ಹೊರಬಿದ್ದಾಗಿನಿಂದ ತಲೆಮರೆಸಿಕೊಂಡಿದ್ದಾನೆ.
ತನಿಖೆಯ ಸಮಯದಲ್ಲಿ, ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವಿಭಾಗ) ವಿದ್ಯಾರ್ಥಿವೇತನದಡಿಯಲ್ಲಿ ದಾಖಲಾದ 32 ಪಿಜಿಡಿಎಂ ವಿದ್ಯಾರ್ಥಿಗಳಿಂದ ಪೊಲೀಸರು ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ 17 ವಿದ್ಯಾರ್ಥಿಗಳು ಪಾರ್ಥ ಸಾರಥಿ ನಿಂದನೀಯ ಭಾಷೆ ಬಳಸಿದ್ದಾನೆ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ ಮತ್ತು ಅನಗತ್ಯ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಕೆಲವು ಅಧ್ಯಾಪಕರು ಮತ್ತು ಸಂಸ್ಥೆಯ ಆಡಳಿತಾಧಿಕಾರಿಗಳು ಸರಸ್ವತಿಯ ಬೇಡಿಕೆಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್)ಯ ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, 16 ಮಂದಿ ವಿದ್ಯಾರ್ಥಿನಿಯರು ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.