ನೋಯ್ಡಾ: ದೇಶದಲ್ಲಿ ಖಡಕ್ ಮುಖ್ಯಮಂತ್ರಿ ಎಂದೇ ಹೆಸರಾದ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ನಡು ರಸ್ತೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಬರ್ ಡ್ರೈವರ್ ಒಬ್ಬ ರಾಡ್ ಹಿಡಿದು ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಿಂದ ಯೋಗಿ ನಾಡಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲವೇ ಎಂಬ ಅನುಮಾನ ಉಂಟಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕ್ಯಾಬ್ ಡ್ರೈವರ್ ನನ್ನು ಬಂಧಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು? ತಾಶು ಗುಪ್ತಾ ಎಂಬ ಮಹಿಳೆ ಮಂಗಳವಾರ ಬೊಟಾನಿಕಲ್ ಗಾರ್ಡನ್ ನಿಂದ ಸೆಕ್ಟರ್ 128ಕ್ಕೆ ಉಬರ್ ಕ್ಯಾಬ್ ವೊಂದನ್ನು ಬುಕ್ ಮಾಡಿದ್ದಾರೆ. ಅವರೊಂದಿಗೆ ಇತರ ನಾಲ್ವರು ಗೆಳತಿಯರು ಕೂಡಾ ಜೊತೆಯಲ್ಲಿದ್ದರು. ಕಾರು ಉತ್ತರ ಪ್ರದೇಶ ನೋಂದಣಿಯದ್ದಾಗಿತ್ತು. ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಯೂ ಟರ್ನ್ ಬದಲಿಗೆ ಅಂಡರ್ ಪಾಸ್ ನಲ್ಲಿ ತೆರಳುವಂತೆ ಚಾಲಕ ಬ್ರಜೇಶ್ ಗೆ ಗುಪ್ತಾ ಮನವಿ ಮಾಡಿದಾಗ ಮಾತಿನ ಚಕಮಕಿ ಉಂಟಾಗಿದೆ.
ಆಕೆಯ ಮಾತನ್ನು ತಲೆಗೆ ಹಾಕಿಕೊಳ್ಳದ ಡ್ರೈವರ್ ಉದ್ಧಟತನಿಂದ ವರ್ತಿಸಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ಡ್ರೈವರ್ ಕೆಟ್ಟ ರೀತಿಯಲ್ಲಿ ವರ್ತಿಸಿರುವುದಾಗಿ ಗುಪ್ತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸಿದ್ದು, ರಾಡ್ ನಿಂದ ಹೊಡೆಯಲು ಪ್ರಯತ್ನಿಸಿದ್ದಾನೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆರೋಪಿಸಿದ್ದಾರೆ.
ಸ್ವಲ್ಪ ಸೌಜನ್ಯಯುತವಾಗಿ ಮಾತನಾಡುವಂತೆ ಮನವಿ ಮಾಡಿದಾಗ, ಏನು ಮಾಡ್ತಿಯೋ ಮಾಡು. ಹೋಗು, ನನನ್ನು ಗಲ್ಲಿಗೇರಿಸು ಅಂತಾ ರೇಗಾಡುತ್ತಾ, ಮತ್ತೆ ನಿಂದಿಸುತ್ತಾ ಹೊಡೆಯಲು ಪ್ರಯತ್ನಿಸಿದ. ನಾನು ಆತನ ಬಲಭಾಗದಲ್ಲಿ ಕುಳಿತುಕೊಂಡಿದ್ದೆ. ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸುವಂತೆ ಕೇಳಿಕೊಂಡಾಗ ಕಾರು ನಿಲ್ಲಿಸಿದ. ತದನಂತರ ಕಾರಿನಿಂದ ಹೊರಗೆ ಬಂದ ನಂತರ ಪಾಠ ಕಲಿಸುತ್ತೇನೆ ಎಂದು ಹೇಳುತ್ತಾ, ಹಣ ಕೊಟ್ಟು ಇಲ್ಲಿಂದ ಹೊರಡು ಅಂತಾ ಧಮ್ಕಿ ಹಾಕಿದ್ದಾನೆ.
ಹಣ ಕೊಡಲ್ಲ ಅಂತಾ ಹೇಳಿದಾಗ ಕಾರಿನಿಂದ ರಾಡ್ ತೆಗೆದು ಹೊಡೆಯುವುದಕ್ಕೆ ಮುಂದಾಗಿದ್ದಾನೆ. ಸ್ವಲ್ಪ ಕಾಯಿ, ಪಾಠ ಕಲಿಸುತ್ತೇನೆ. ಕೊಲೆ ಮಾಡಿ ಜೈಲಿಗೆ ಹೋಗುತ್ತೇನೆ. ಅದನ್ನು ಮಾಡೇ ಮಾಡ್ತೀನಿ ಅಂತಾ ಕಾರು ನಿಂದ ಬಿಳಿ ಬಣ್ಣದ ರಾಡ್ ನಿಂದ ಹೊಡೆಯಲು ಮುಂದಾದ ಎಂದು ಆಕೆ ಬರೆದುಕೊಂಡಿದ್ದಾರೆ.
ಘಟನೆಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ ನನ್ನ ಸ್ನೇಹಿತೆಯನ್ನು ಅಟ್ಟಾಡಿಸಿಕೊಂಡು ಹೋದ ಡ್ರೈವರ್, ಆಕೆಯ ಮೊಬೈಲ್ ಫೋನ್ ದೋಚಲು ಯತ್ನಿಸಿದ. ಆಕೆ ಕೂಡಾ ಸ್ಥಳೀಯ ಅಧಿಕಾರಿಗಳು ಮತ್ತು ಸಹಾಯವಾಣಿ ಸಂಪರ್ಕಿಸಲು ಪ್ರಯತ್ನಿದ್ದಾಳೆ. ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಇಂತಹ ನಡೆ ಸ್ವೀಕರಿಸಲು ಸಾಧ್ಯವಿಲ್ಲ. ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇವೆ. ನೇರ ಸಂದೇಶದ ಮೂಲಕ ನಿಮ್ಮ ನೋಂದಾಯಿತ ಉಬರ್ ಅಕೌಂಟ್ ಸಂಪರ್ಕದ ವಿವರ ಕಳುಹಿಸಿ, ಸುರಕ್ಷತಾ ತಂಡ ಶೀಘ್ರವಾಗಿ ನಿಮ್ಮನ್ನು ಸಂಪರ್ಕಿಸಲಿದೆ ಎಂದು ಉಬರ್ ಹೇಳಿದೆ.