ಸಂಭಾಲ್: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಶಿಕ್ಷಕಿಯೊಬ್ಬರ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ಎನ್ಕೌಂಟರ್ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಯನ್ನು ಅಮ್ರೋಹಾ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣಾ ಪ್ರದೇಶದ ಟಿಗ್ರಿ ಗ್ರಾಮದ ನಿವಾಸಿ ನಿಶು ತಿವಾರಿ (30) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 23 ರಂದು, ನಖಾಸಾ ಪೊಲೀಸ್ ಠಾಣಾ ಪ್ರದೇಶದಲ್ಲಿ, 22 ವರ್ಷದ ಶಿಕ್ಷಕಿಯೊಬ್ಬರು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಸ್ಕೂಟರ್ ನಲ್ಲಿ ಬಂದ ಆರೋಪಿ, ದೇಹಪಾ ಗ್ರಾಮದ ಬಳಿ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಕೃಷ್ಣ ಕುಮಾರ್ ಅವರು ತಿಳಿಸಿದ್ದಾರೆ.
ಆಸಿಡ್ ದಾಳಿಯಲ್ಲಿ ಶಿಕ್ಷಕಿಗೆ ಶೇಕಡಾ 20 ರಿಂದ 30 ರಷ್ಟು ಸುಟ್ಟ ಗಾಯಗಳಾಗಿವೆ. ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.
ಗುರುವಾರ ರಾತ್ರಿ ಕಲ್ಯಾಣಪುರ ಗ್ರಾಮದ ಬಳಿ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಆರೋಪಿಯನ್ನು ನಖಾಸಾ ಪೊಲೀಸರು ತಡೆದಾಗ, ಪೊಲೀಸ್ ಸಿಬ್ಬಂದಿ ಮೇಲೆಯೇ ಆರೋಪಿ ಗುಂಡು ಹಾರಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ತಿವಾರಿಯನ್ನು ಬಂಧಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಆರೋಪಿಯಿಂದ ಒಂದು ಪಿಸ್ತೂಲ್, ಎರಡು ಕಾರ್ಟ್ರಿಡ್ಜ್ ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.