ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ 80ನೇ ಅಧಿವೇಶನದಲ್ಲಿನ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅಸಂಬದ್ಧ ಭಾಷಣಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿಯೇ ತೀವ್ರ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು, 'ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಗಮಗೊಳಿಸಿದ ಕದನ ವಿರಾಮಕ್ಕೆ ಪಾಕಿಸ್ತಾನ ಒಪ್ಪಿಕೊಂಡಿತು. ಅವರ ಮಧ್ಯ ಪ್ರವೇಶದಿಂದಾಗಿಯೇ ಯುದ್ದ ಉಲ್ಬಣವಾಗಲಿಲ್ಲ. ಅವರು ಮಧ್ಯಪ್ರವೇಶಿಸದಿದ್ದರೆ, ಅದು ಘೋರ ಯುದ್ಧವಾಗಿರುತ್ತಿತ್ತು. ಟ್ರಂಪ್ ಶಾಂತಿ ಪ್ರಿಯ ವ್ಯಕ್ತಿ. ನಾವು ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬೇಕು. ಇದು ನಾವು ಅವರಿಗೆ ನೀಡುವ ಕನಿಷ್ಠ ಗೌರವ ಎಂದು ಹೇಳಿದ್ದರು.
ಇದೇ ವೇಳೆ ಭಾರತದ ಜೊತೆಗಿನ ಯುದ್ಧದ ವೇಳೆ ಪಾಕಿಸ್ತಾನ ಸೇನೆಯ ಶೌರ್ಯ ಶ್ಲಾಘಿಸಿದ ಶೆಹಬಾಜ್ ಷರೀಫ್, ನಮ್ಮ ನಗರಗಳ ಮೇಲೆ ದಾಳಿ ಮಾಡಲು ಬಂದ ಭಾರತದ 7 ಯುದ್ಧವಿಮಾನಗಳನ್ನು ಹೊಡೆದುರುಳಿಸಿದೆವು. ನಮ್ಮ ಸೇನೆ ಮತ್ತು ಅಂದಿನ ಸೇನಾಧ್ಯಕ್ಷ ಆಸಿಫ್ ಮುನೀರ್ ಅವರ ಈ ಸಾಹಸ ಶ್ಲಾಘನೀಯ ಎಂದು ಹೇಳಿದ್ದರು,
"ಈ ವರ್ಷ ಮೇ ತಿಂಗಳಲ್ಲಿ ನಮ್ಮ ದೇಶವು ಪೂರ್ವ ಭಾಗದಿಂದ ಅಪ್ರಚೋದಿತ ಆಕ್ರಮಣವನ್ನು ಎದುರಿಸಿತು. ನಮ್ಮ ಪ್ರತಿಕ್ರಿಯೆ ಆತ್ಮರಕ್ಷಣೆಗೆ ಅನುಗುಣವಾಗಿತ್ತು. ಆದಾಗ್ಯೂ ನಾವು ಅವರನ್ನುಶೌರ್ಯದಿಂದ ಹಿಮ್ಮೆಟಿಸಿದೆವು. ಭಾರತ ನಮ್ಮ ನಗರಗಳ ಮೇಲೆ ದಾಳಿ ಮಾಡಿ ನಮ್ಮ ನಾಗರಿಕರನ್ನು ಗುರಿಯಾಗಿಸಿಕೊಂಡಿತು ಎಂದು ತಿಳಿಸಿದ್ದರು.
ಈ ಹೇಳಿಕೆಗೆ ಭಾರತೀಯ ರಾಜತಾಂತ್ರಿಕ ರಾಯಭಾರಿ ಪೆಟಲ್ ಗಹ್ಲೋಟ್ ಅವರು, ತೀವ್ರವಾಗಿ ತಿರುಗೇಟು ನೀಡಿದರು.
ಭಯೋತ್ಪಾದಕರನ್ನು ವೈಭವೀಕರಿಸುವುದು ಮತ್ತು ನಿಂದಿಸುವುದು ಪಾಕಿಸ್ತಾನದ ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಇದೇ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣವಾದ ಭಯೋತ್ಪಾದಕ ಸಂಘಟನೆ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಅನ್ನು ರಕ್ಷಿಸಿದ್ದಕ್ಕಾಗಿ ಮತ್ತು ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದಕ್ಕಾಗಿ ಪಾಕಿಸ್ತಾನದ ಕುತಂತ್ರವನ್ನು ಬಹಿರಂಗಪಡಿಸಿದರು.
ಯಾವುದೇ ನಾಟಕ ಅಥವಾ ಸುಳ್ಳು, ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಅನ್ನು ಭಾರತೀಯ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಬರ್ಬರ ಹತ್ಯಾಕಾಂಡವನ್ನು ನಡೆಸುವ ಜವಾಬ್ದಾರಿಯಿಂದ ರಕ್ಷಿಸಿದ್ದು ಇದೇ ಪಾಕಿಸ್ತಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನವು ಭಯೋತ್ಪಾದನೆ ಹುಟ್ಟು ಹಾಕುವಲ್ಲಿ ಮತ್ತು ರಪ್ತು ಮಾಡುವಲ್ಲಿ ಬಹಳ ಹಿಂದಿನಿಂದಲೇ ಅದರಲ್ಲಿ ಮುಳುಗಿದೆ. ಈಗ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಪಾಲುದಾರನಂತೆ ನಟಿಸುತ್ತಿದೆ. ಆದರೆ, ಇದೇ ದೇಶವು ಒಸಾಮಾ ಬಿನ್ ಲಾಡೆನ್‌ಗೆ ಒಂದು ದಶಕದ ಕಾಲ ಆಶ್ರಯ ನೀಡಿತ್ತು ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಯೋತ್ಪಾದನೆ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪಾಕಿಸ್ತಾನ ಸೇನೆ ಹಿಮ್ಮೆಟ್ಟಿಸಿತು ಎಂಬ ಪಾಕ್ ಪ್ರಧಾನಿ ಹೇಳಿಕೆ ಸುಳ್ಳು ಎಂದ ಅವರು, ಮೇ 10ಚ ರಂದು ಪಾಕ್ ಸೇನೆಯೇ ಕಾರ್ಯಾಚರಣೆ ನಿಲ್ಲಿಸುವಂತೆ ಭಾರತದ ಬಳಿ ಅಂಗಲಾಚಿತ್ತು ಎಂದು ತಿಳಿಸಿದರು.
ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ದ್ವಂದ್ವ ನೀತಿಯು ಪಾಕಿಸ್ತಾನದ ಪ್ರಧಾನಿಯ ಹೇಳಿಕೆಯಲ್ಲೇ ಗೋಚರಿಸಿದೆ. ಇದು ನಿಜಕ್ಕೂ ಆಶ್ಚರ್ಯಕರ. ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೇನಾಪಡೆಗಳಿಂದ ಬಹಾವಲ್ಪುರ್ ಮತ್ತು ಮುರಿಡ್ಕೆ ಉಗ್ರರ ನೆಲೆಗಳಲ್ಲಿ ಹತ್ಯೆಯಾದ ಭಯೋತ್ಪಾದಕರ ಅನೇಕ ಚಿತ್ರಗಳನ್ನು ನಾವು ನೋಡಿದ್ದೇವೆ. ಈ ಉಗ್ರರಿಗೆ ಪಾಕಿಸ್ತಾನದ ಹಿರಿಯ ಸೇನಾಧಿಕಾರಿಗಳು ಸಾರ್ವಜನಿಕವಾಗಿ ಗೌರವ ಸಲ್ಲಿಸಿದ್ದಾರೆ. ಇದು ಯಾವ ನೀತಿಯನ್ನು ತೋರಿಸುತ್ತದೆ.
ಭಾರತದಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಇದೇ ಸತ್ಯ. ಅಂತಹ ಕ್ರಮಗಳ ವಿರುದ್ಧ ನಮ್ಮ ಜನರನ್ನು ರಕ್ಷಿಸುವ ಹಕ್ಕನ್ನು ನಾವು ಬಳಸಿದ್ದೇವೆ. ನ್ಯಾಯ ಒದಗಿಸಿದ್ದೇವೆ ಎಂದರು.
ಪಾಕಿಸ್ತಾನದ ಪ್ರಧಾನಿ ಭಾರತದೊಂದಿಗೆ ಶಾಂತಿಯನ್ನು ಬಯಸುವ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯ ಬಗ್ಗೆ ನಿಜಕ್ಕೂ ಗಂಭೀರವಾಗಿದ್ದರೆ, ಅದು ಎಲ್ಲಾ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ನಿಮ್ಮ ಪರಮಾಣು ಬಾಂಬ್ ದಾಳಿಗೆ ಭಾರತ ಹೆದರುವುದಿಲ್ಲ ಎಂದೂ ತಿರುಗೇಟು ನೀಡಿದರು.
ದ್ವೇಷ, ಧರ್ಮಾಂಧತೆ ಮತ್ತು ಅಸಹಿಷ್ಣುತೆಯಲ್ಲಿ ಮುಳುಗಿರುವ ದೇಶವು ಈ ಸಭೆಗೆ ನಂಬಿಕೆಯ ವಿಷಯಗಳ ಕುರಿತು ಬೋಧಿಸುತ್ತಿರುವುದು ವಿಪರ್ಯಾಸ. ಪಾಕಿಸ್ತಾನದ ರಾಜಕೀಯ ಮತ್ತು ಸಾರ್ವಜನಿಕ ಭಾಷಣವು ಅದರ ನಿಜವಾದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.