ಇಡುಕ್ಕಿ: ಕೇರಳಾದ್ಯಂತ ಸುರಿಯುತ್ತಿರುವ ನಿರಂತರ ಭಾರಿ ಮಳೆಯು ಪ್ರವಾಹ ಮತ್ತು ಮತ್ತೆ ಭೂಕುಸಿತಗಳಿಗೆ ಕಾರಣವಾಗಿದ್ದು, ಶನಿವಾರ ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಅವಶೇಷಗಳಡಿ ಹಲವರು ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟವರನ್ನು ಇಡುಕ್ಕಿ ಜಿಲ್ಲೆಯ ಕುದಯತ್ತೂರು ಸಮೀಪದ ಆಡೂರ್‌ಮಾಲಾ ಪ್ರದೇಶದ ನಿವಾಸಿ ಸುಮತಿ ಎಂದು ಗುರುತಿಸಲಾಗಿದೆ. ಶನಿವಾರ ನಸುಕಿನ ಜಾವದಲ್ಲಿ ಸಂಭವಿಸಿದ ಭೂಕುಸಿತದ ಅವಶೇಷಗಳು ಅವರ ಮನೆಗೆ ಅಪ್ಪಳಿಸಿದವು ಎಂದು ಜಿಲ್ಲಾಡಳಿತ ತಿಳಿಸಿದೆ. ನೆರೆಹೊರೆಯವರು ಅವರ ಪತಿ ಮತ್ತು ದಂಪತಿಯ ಮಗನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಅವರನ್ನು ತೋಡುಪುಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕುಸಿತದಲ್ಲಿ ಕುಟುಂಬದ ಮನೆ ಸಂಪೂರ್ಣವಾಗಿ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಅಗ್ನಿಶಾಮಕ ಮತ್ತು ರಕ್ಷಣಾ ದಳ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಸುಮತಿ ಅವರ ಮೃತದೇಹವನ್ನು ಹೊರತೆಗೆಯಲಾಯಿತು. ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತೋಟಂನಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತ ಘಟನೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಆತನ ತಾಯಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಮೃತರನ್ನು ಜಾನಿ ಅವರ ಪುತ್ರ ಜೋಸೆಫ್ ಎಂದು ಗುರುತಿಸಲಾಗಿದೆ. ಅವಶೇಷಗಳಡಿ ಸಿಲುಕಿರಬಹುದು ಎಂದು ಶಂಕಿಸಲಾಗಿರುವ ಆತನ ತಾಯಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೋಸೆಫ್ ಅವರನ್ನು ರಕ್ಷಿಸಲಾಯಿತಾದರೂ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಗಾಯಗಳಿಂದಾಗಿ ಮೃತಪಟ್ಟರು. ಮತ್ತೊಂದು ಘಟನೆಯಲ್ಲಿ ಇಡುಕ್ಕಿ ಜಿಲ್ಲೆಯ ವಗಮೋನ್ ಪ್ರದೇಶದಲ್ಲಿ ಭೂಕುಸಿತದಿಂದ ಮನೆಯೊಂದು ಧ್ವಂಸಗೊಂಡಿದ್ದು, ಪ್ರಭಾಕರನ್ ನಾಯರ್ ಎಂಬವರು ಮೃತಪಟ್ಟಿದ್ದಾರೆ.
ಕೋಟಾಯಂನ ವೈಕೋಮ್ ಮೂಲದ ನಾಯರ್, ಭೂಕುಸಿತ ಸಂಭವಿಸಿದಾಗ ತಮ್ಮ ಸಂಬಂಧಿಕರ ಮನೆಯ ಕೊಠಡಿಯೊಂದರಲ್ಲಿ ನಿದ್ರಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಟೆಗಳ ಕಾಲ ನಡೆದ ಶೋಧನೆಯ ನಂತರ ಅವರ ಮೃತದೇಹವನ್ನು ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಡುಕ್ಕಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಪ್ರವಾಹದ ವರದಿಗಳಾಗಿವೆ. ಉಪ್ಪುಥಾರಾದಲ್ಲಿ, ಭೂಕುಸಿತದಿಂದಾಗಿ ನಿಲ್ಲಿಸಿದ್ದ ಪೊಲೀಸ್ ಜೀಪ್‌ಗೆ ಹಾನಿಯಾಗಿದೆ.
ಪುಲ್ಲಕಾಯರ್ ನದಿ ಉಕ್ಕಿ ಹರಿಯುತ್ತಿರುವುದರಿಂದ, ಕೊಕ್ಕಾಯರ್‌ನ ತಗ್ಗು ಪ್ರದೇಶದ ರಸ್ತೆ ಮಾರ್ಗವು (ಚಪ್ಪತ್) ಜಲಾವೃತಗೊಂಡಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಆರು ಮನೆಗಳು ಜಲಾವೃತಗೊಂಡಿದ್ದು, ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಇನ್ನೂ ಹಲವು ಭೂಕುಸಿತಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಸಂಚಾರಕ್ಕೂ ಅಡಚಣೆಯಾಗಿದೆ.
ಭೂಕುಸಿತದ ನಂತರ ಕಟ್ಟಪ್ಪನ ಮತ್ತು ವಝವಾರ ನಡುವಿನ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು; ಹಾಗೆಯೇ ವಂಡಿಪೆರಿಯಾರ್‌ನ ಚೊಟ್ಟುಪಾರ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 183ರಲ್ಲಿ ನೀರು ನಿಂತು ಸಂಚಾರ ಸಮಸ್ಯೆ ಉಂಟಾಯಿತು. ನೆಲ್ಲಿಮಾಲಾದಲ್ಲಿಯೂ ರಸ್ತೆ ತಡೆಯುಂಟಾಗಿ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು. ಜಿಲ್ಲೆಯಲ್ಲಿರುವ ಸಣ್ಣ ಅಣೆಕಟ್ಟುಗಳ ಶಟರ್‌ಗಳನ್ನು ತೆರೆಯುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ.
ಪಂಪಾ ನದಿಯಲ್ಲಿ ನೀರಿನ ಮಟ್ಟ ಹಠಾತ್ತನೆ ಏರಿಕೆ: ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಥನಂತಿಟ್ಟ ಜಿಲ್ಲೆಯಲ್ಲಿ ಪರಿಹಾರ ಶಿಬಿರಗಳನ್ನು ಕೂಡ ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕೇರಳದ ಮಧ್ಯಭಾಗದ ಹೊರತಾಗಿ, ಕೊಲ್ಲಂ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲೂ ಭಾರೀ ಮಳೆಯಾಗಿದೆ. ಅಲ್ಲದೆ, ಕೋಝಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಪ್ರವಾಹ ಹಾಗೂ ಸಣ್ಣ ಪ್ರಮಾಣದ ಭೂಕುಸಿತಗಳು ವರದಿಯಾಗಿವೆ.
ಕೋಝಿಕ್ಕೋಡ್‌ನ ಚಲಿಯಂನಲ್ಲಿ ಮೀನುಗಾರಿಕಾ ದೋಣಿಯೊಂದು ಎತ್ತರದ ಅಲೆಗಳ ನಡುವೆ ಸಿಲುಕಿಕೊಂಡಿತ್ತು ಮತ್ತು ನಂತರ ಅದರಿಂದ ಮೀನುಗಾರರನ್ನು ರಕ್ಷಿಸಲಾಯಿತು. ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದ್ದು, ಇದರ ಹಿನ್ನೆಲೆಯಲ್ಲಿ ಅಧಿಕಾರಿಗಳು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದ್ದಾರೆ ಹಾಗೂ ಅಪಾಯದ ವಲಯಗಳಲ್ಲಿರುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.
IMD 'ರೆಡ್ ಅಲರ್ಟ್' ಘೋಷಣೆ: ಪಥನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯೊಂದಿಗೆ IMD 'ರೆಡ್ ಅಲರ್ಟ್' ಘೋಷಿಸಿದೆ. ಎರ್ನಾಕುಲಂ, ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಶನಿವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಪರಿಗಣಿಸಿ, ಜಿಲ್ಲಾಡಳಿತಗಳು ಹಲವು ಜಿಲ್ಲೆಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿವೆ.