ನವದೆಹಲಿ: ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ಸಮರ್ಥಿಸಿಕೊಂಡ ಪೆಟ್ರೋಲಿಯಂ ಸಚಿವಾಲಯ, ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 135 ಡಾಲರ್ ತಲುಪಿದಾಗ, ತೈಲ ಕಂಪನಿಗಳು ಇಂಧನಕ್ಕೆ ಎಥೆನಾಲ್ ಅನ್ನು ಬೆರೆಸದಿದ್ದರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 125 ರೂ. ತಲುಪುತ್ತಿತ್ತು ಎಂದು ಶುಕ್ರವಾರ ಹೇಳಿದೆ.
ದೇಶೀಯವಾಗಿ ಪೂರ್ವನಿಗದಿತ ದರದಲ್ಲಿ ಖರೀದಿಸಿದ ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಶೇ.20ರಷ್ಟು ಮಿಶ್ರಣ ಮಾಡಿದ್ದರಿಂದ ಗ್ರಾಹಕರು ಪ್ರತಿ ಲೀಟರ್‌ಗೆ 94.77 ರೂ. ಬೆಲೆಯಲ್ಲೇ ಪೆಟ್ರೋಲ್ ಅನ್ನು ಖರೀದಿಸಲು ಸಾಧ್ಯವಾಗುತ್ತಿದೆ ಎಂದು ಸಚಿವಾಲ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸರ್ಕಾರದ ಪ್ರಕಾರ, ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಭಾರೀ ಹೊರೆಗಳಿಂದ ಗ್ರಾಹಕರನ್ನು ರಕ್ಷಿಸಿದ್ದು E20 ಪೆಟ್ರೋಲ್. ಸಂಕಷ್ಟದ ಅವಧಿಯಲ್ಲಿ ಪ್ರತಿ ಲೀಟರ್‌ಗೆ ಸುಮಾರು 30 ರೂ.ವರೆಗೆ ಉಳಿತಾಯವಾಗಲು E20 ಕಾರಣವಾಗಿದೆ.
ಬಡವರಿಗಾಗಿ ಮೀಸಲಾದ ಆಹಾರ ಧಾನ್ಯವನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಅಥವಾ ಈ ಕಾರ್ಯಕ್ರಮವನ್ನು ಬೆಂಬಲಿಸಲು ಭಾರತೀಯ ಆಹಾರ ನಿಗಮ(FCI)ದ ಸಬ್ಸಿಡಿ ಅಕ್ಕಿಯನ್ನ ಬಳಸಲಾಗುತ್ತಿದೆ ಎಂಬ ಆರೋಪಗಳನ್ನು ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ.
ಫೆಬ್ರವರಿ 28 ರಂದು ಪಶ್ಚಿಮ ಏಷ್ಯಾ ಸಂಘರ್ಷ ಭುಗಿಲೆದ್ದ ನಂತರ ಸುಮಾರು 75 ದಿನಗಳವರೆಗೆ ದೇಶದಲ್ಲಿ ಇಂಧನ ಬೆಲೆಗಳು ಬದಲಾಗಿಲ್ಲ. ಜಾಗತಿಕ ಕಚ್ಚಾ ಮಾರುಕಟ್ಟೆಗಳಲ್ಲಿನ ಏರಿಳಿತದ ಹೊರತಾಗಿಯೂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಸ್ಥಿರವಾಗಿರಿಸಿದೆ. ನಂತರ ಮೇ ತಿಂಗಳಲ್ಲಿ ಲೀಟರ್‌ಗೆ 7.50 ರೂ. ಹೆಚ್ಚಳ ಮಾಡಿತ್ತು.