ಪ್ರಧಾನಿ ಮೋದಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ 
ದೇಶ

‘ಮಗಳನ್ನು ಕ್ಷಮಿಸಿ ಮೋದಿಜಿ ಹೊಸ ಜೀವನ ಕೊಟ್ಟಿದ್ದಾರೆ, ಮಕ್ಕಳಿಗೆ Instagram, Facebook ಬೇಡ': ಪ್ರಧಾನಿ ವಿರುದ್ಧ ನಿಂದನೆ ಮಾಡಿದ ಬಾಲಕಿಯ ತಾಯಿ

ಇಷ್ಟೊಂದು ಕೊಳಕು ಪದಗಳನ್ನು ಬಳಸಿದ್ದ ದೇಶದ ಮಗಳನ್ನು ಕ್ಷಮಿಸುವ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ್ದ ಅಪ್ರಾಪ್ತ ಬಾಲಕಿಯನ್ನು ಕ್ಷಮಿಸುವ ಮೂಲಕ ಆಕೆಗೆ ಹೊಸ ಜೀವನ ನೀಡಿದ್ದಾರೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಕೈಮುಗಿದು ಕ್ಷಮೆಯಾಚಿಸಿದ್ದ ಬಾಲಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಆಕೆಯ ತಾಯಿ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಭಾವುಕ ಸಂದರ್ಶನದಲ್ಲಿ ಮಾತನಾಡಿದ ಬಾಲಕಿಯ ತಾಯಿ, ಪ್ರಧಾನಿ ಮೋದಿ ಅವರು ತಮ್ಮ ಮಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನೂ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

“ಇಷ್ಟೊಂದು ಕೊಳಕು ಪದಗಳನ್ನು ಬಳಸಿದ್ದ ದೇಶದ ಮಗಳನ್ನು ಕ್ಷಮಿಸುವ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ. ಅವರಿಗೆ ಕೈಮುಗಿದು ಧನ್ಯವಾದ ಹೇಳುತ್ತೇನೆ. ಇಂದು ನನ್ನ ಮಗಳಿಗೆ ಹೊಸ ಜನ್ಮ ಸಿಕ್ಕಂತಾಗಿದೆ. ಪ್ರಧಾನಿ ಅವರು ಆಕೆಗೆ ನೀಡಿರುವ ಅತಿದೊಡ್ಡ ಉಡುಗೊರೆ ಎಂದರೆ ಜೀವನದಾನ” ಎಂದು ತಾಯಿ ಹೇಳಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ವಾರ ನೋಯ್ಡಾ ಪೊಲೀಸರು ದೂರು ಆಧರಿಸಿ ‘ಜೀರೋ ಎಫ್‌ಐಆರ್‌’ ದಾಖಲಿಸಿದ್ದರು. ಎಫ್‌ಐಆರ್‌ನಲ್ಲಿ ಆರೋಪಿಯ ಹೆಸರು ರುಚಿಕಾ ಸಿಂಗ್, ವಯಸ್ಸು 25 ಎಂದು ನಮೂದಿಸಲಾಗಿತ್ತು. ಆದರೆ, ಎಫ್‌ಐಆರ್‌ನಲ್ಲಿ ತನ್ನ ಮಗಳ ಹೆಸರು ಮತ್ತು ವಯಸ್ಸು ತಪ್ಪಾಗಿ ನಮೂದಿಸಲಾಗಿದೆ ಎಂದು ಆಕೆಯ ತಾಯಿ ಸ್ಪಷ್ಟಪಡಿಸಿದ್ದಾರೆ.

ತಪ್ಪು ಅರಿವಾಗಿದೆ.. ಎಫ್ ಐಆರ್ ರದ್ದು ಮಾಡಿ

ತನ್ನ ಮಗಳ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈಬಿಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ ಅವರು, “ತಪ್ಪು ಮಾಡಿದ್ದೇವೆ ಎಂಬ ಅರಿವು ನಮಗಿದೆ. ಈ ತಪ್ಪಿಗಾಗಿ ನಾವು ನಾಚಿಕೆಪಡುತ್ತಿದ್ದೇವೆ. ಆದರೆ, ತಪ್ಪು ಹೆಸರು ಮತ್ತು ವಯಸ್ಸಿನಲ್ಲಿ ದಾಖಲಿಸಿರುವ ಎಫ್‌ಐಆರ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಜೀ ಅವರು ರದ್ದುಪಡಿಸುವಂತೆ ನಾನು ಕೈಮುಗಿದು ಮನವಿ ಮಾಡುತ್ತೇನೆ. ಆಗ ನನ್ನ ಮಗಳು ನೆಮ್ಮದಿಯಿಂದ ಬದುಕಬಹುದು. ಈಗ ಆಕೆ ನಿಮ್ಮ ಮೇಲ್ವಿಚಾರಣೆಯಲ್ಲಿದ್ದಾಳೆ” ಎಂದು ಹೇಳಿದ್ದಾರೆ.

‘18 ವರ್ಷದೊಳಗಿನ ಮಕ್ಕಳಿಗೆ Instagram, Facebook ಬೇಡ’

ಅಪ್ರಾಪ್ತ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸುವಂತೆ ಪ್ರಧಾನಿ ಮೋದಿಗೆ ಬಾಲಕಿಯ ತಾಯಿ ಮನವಿ ಮಾಡಿದ್ದಾರೆ. “ಪ್ರಧಾನಿ ಮೋದಿಯವರಿಗೆ ನನ್ನ ವಿನಮ್ರ ಮನವಿ ಏನೆಂದರೆ, 18 ವರ್ಷದೊಳಗಿನ ಮಕ್ಕಳಿಗೆ Instagram ಮತ್ತು Facebook ಬಳಕೆಯನ್ನು ನಿಲ್ಲಿಸಬೇಕು.

ಅವರು ಓದಿನ ಕಡೆ ಮಾತ್ರ ಗಮನ ಹರಿಸುವಂತಾಗಬೇಕು. ಪ್ರತಿಭಟನೆ ನಡೆಯುವ ಸ್ಥಳಗಳಿಗೆ ಮಕ್ಕಳನ್ನು ಹೋಗಲು ಬಿಡಬಾರದು. ಈ ಮಕ್ಕಳನ್ನು ಸುಲಭವಾಗಿ ದಾರಿ ತಪ್ಪಿಸಬಹುದು ಅಥವಾ ಕೆಲವರು ತಮ್ಮ ಲಾಭಕ್ಕಾಗಿ ಅವರನ್ನು ಬಳಸಿಕೊಳ್ಳಬಹುದು. ಚಿಕ್ಕ ಮಕ್ಕಳಿಗೆ ಜಗತ್ತಿನ ಅರಿವು ಇರುವುದಿಲ್ಲ. ಹಿರಿಯರನ್ನು ಹೇಗೆ ಗೌರವಿಸಬೇಕು ಎಂಬುದೂ ಅವರಿಗೆ ಸಂಪೂರ್ಣವಾಗಿ ತಿಳಿದಿರುವುದಿಲ್ಲ” ಎಂದು ಅವರು ಹೇಳಿದ್ದಾರೆ.

‘ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು’.. ನನಗಿನ್ನೂ 15 ವರ್ಷ ದಯವಿಟ್ಟು ಬಿಟ್ಟು ಬಿಡಿ

ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಾದ ಬಳಿಕ ಬಾಲಕಿಯೂ ಪ್ರಧಾನಿ ಮೋದಿಯವರಲ್ಲಿ ಕ್ಷಮೆಯಾಚಿಸಿದ್ದಳು. ಪ್ರತಿಭಟನೆಯ ಸಂದರ್ಭದಲ್ಲಿ ಇತರರ ಪ್ರಭಾವಕ್ಕೆ ಒಳಗಾಗಿ ಪ್ರಧಾನಿ ವಿರುದ್ಧ ಕೆಟ್ಟ ಪದಗಳನ್ನು ಬಳಸಿದ್ದಾಗಿ ಆಕೆ ಹೇಳಿದ್ದಳು.

“ನನಗೆ ಇನ್ನೂ 15 ವರ್ಷ ವಯಸ್ಸು. ನಾನು ಮಾಡಿದ್ದನ್ನು ಕ್ಷಮಿಸಲು ಸಾಧ್ಯವಿಲ್ಲ. ನಾನು ಸಾಕಷ್ಟು ಕೆಟ್ಟ ಮಾತುಗಳನ್ನು ಆಡಿದ್ದೇನೆ. ಇದು ನನ್ನ ಮೊದಲ ಮತ್ತು ಕೊನೆಯ ತಪ್ಪು. ಇಡೀ ದೇಶದ ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ. ನನ್ನನ್ನೇ ನಾನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಬಾಲಕಿ ಮನವಿ ಮಾಡಿದ್ದಳು.

‘ಅವಾಚ್ಯ ಪದಗಳಿಂದ ಏನೂ ಪರಿಹಾರವಾಗುವುದಿಲ್ಲ’

ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ತಮ್ಮ ವಿರುದ್ಧ ಕೇಳಿಬಂದ ಅವಾಚ್ಯ ಘೋಷಣೆಗಳ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಪ್ರಧಾನಿ ಮೋದಿ ಅವರು ಸಂಯಮ ಮತ್ತು ಕ್ಷಮೆಯ ಮನೋಭಾವ ತೋರುವಂತೆ ಮನವಿ ಮಾಡಿದ್ದರು.

Instagramನಲ್ಲಿ ಹಂಚಿಕೊಂಡಿದ್ದ ರೀಲ್‌ನಲ್ಲಿ, “ಅವಾಚ್ಯ ಪದಗಳಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದರು. ತಪ್ಪು ದಾರಿಗೆ ಹೋಗಿರುವ ಮಕ್ಕಳನ್ನು ಶಿಕ್ಷಿಸುವ ಬದಲು ಅವರಿಗೆ ಸರಿಯಾದ ಮಾರ್ಗ ತೋರಿಸುವುದು ಸಮಾಜದ ಕರ್ತವ್ಯ ಎಂದು ಅವರು ಹೇಳಿದ್ದರು.

“ಅವರು ದಾರಿ ತಪ್ಪಿರುವ ಮಕ್ಕಳು. ಅವರಿಗೆ ಸರಿಯಾದ ದಾರಿ ತೋರಿಸುವುದು ನಮ್ಮ ಕರ್ತವ್ಯ. ಅವರನ್ನು ಶಿಕ್ಷಿಸುವುದು, ನ್ಯಾಯಾಲಯಗಳಿಗೆ ಎಳೆಯುವುದು ಅಥವಾ ಕಿರುಕುಳ ನೀಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ನಾನು ಹೇಳುತ್ತಿರುವುದನ್ನು ಸಮಾಜವೂ ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ಕಗ್ಗಂಟಿಗೆ ಸರ್ವಪಕ್ಷ ಒಗ್ಗಟ್ಟು: 'ರಾಜಕೀಯಕ್ಕಿಂತ ರಾಜ್ಯದ ಹಿತ ಮುಖ್ಯ' ಎಂದ CM ಡಿ.ಕೆ. ಶಿವಕುಮಾರ್

ತೀವ್ರಗೊಂಡ ಗಾಯದ ನೋವು: ಶ್ರೀಲಂಕಾ ಟೆಸ್ಟ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್

ಮಧ್ಯಪ್ರಾಚ್ಯ ರಾಷ್ಟ್ರಗಳ ಮನವಿಗೆ ಮಣಿದ Trump: ಕೊನೆ ಕ್ಷಣದಲ್ಲಿ Iran ಮೇಲಿನ ದಾಳಿಗೆ ಬ್ರೇಕ್‌; ಒಪ್ಪಂದವಾದರೆ ಯುದ್ಧ ಅಂತ್ಯ, ಇಲ್ಲದಿದ್ದರೆ ಭಾರೀ ದಾಳಿ ಎಚ್ಚರಿಕೆ..!

'ನೀರು-ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ'; ನಿಮ್ಮ ದುರ್ವರ್ತನೆಯಿಂದಲೇ ಸಿಂಧು ಜಲ ಒಪ್ಪಂದ ಅಮಾನತು: ಪಾಕಿಸ್ತಾನಕ್ಕೆ ಭಾರತ ತಿರುಗೇಟು

ಭಾರತ-ಚೀನಾ ಗಡಿ ವ್ಯಾಪಾರಕ್ಕೆ ಮರುಜೀವ: 6 ವರ್ಷಗಳ ಬಳಿಕ ನಾಥೂ ಲಾ ಗಡಿಯಲ್ಲಿ ವ್ಯಾಪಾರ ಚಟುವಟಿಕೆ ಪುನರಾರಂಭ..!