ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಲು ಸೆಲೆಬ್ರಿಟಿಗಳಿಗೆ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಹಣ ಪಾವತಿಸಿದ್ದಾರೆ ಎಂದು ಇನ್ಫ್ಲುಯೆನ್ಸರ್) ಫೈಜಾನ್ ಅನ್ಸಾರಿ ಆರೋಪಿಸಿದ್ದು, ಅವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಊರ್ಫಿ ಜಾವೇದ್‌ಗೆ 1 ಲಕ್ಷ ರೂ ಮತ್ತು ಪೂನಂ ಪಾಂಡೆಗೆ 20,000 ರೂ. ನೀಡಲಾಗಿದೆ ಎಂದು ದೂರಿದ್ದಾರೆ.
ದೀಪ್ಕೆ ಪಾಕಿಸ್ತಾನಿ ಏಜೆಂಟ್, ಉಮರ್ ಖಾಲಿದ್ ಬೆಂಬಲಿಗ ಎಂದು ಕರೆದಿದ್ದು, ತಕ್ಷಣ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೀಪ್ಕೆ ದೇಶದ ವಾತಾವರಣವನ್ನು ಹಾಳುಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದು, ಅವರನ್ನು ತಡೆಯದಿದ್ದರೆ ಮುಂದೆ ಮತ್ತಷ್ಟು ಗಲಭೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಊರ್ಫಿ ಜಾವೇದ್, ಪೂನಂ ಪಾಂಡೆ ಸೇರಿದಂತೆ ಹಲವು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದರು. ಜಾವೇದ್ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೂ, ಮುಂಬೈನಲ್ಲಿ ನಡೆದ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಅಲ್ಲದೆ ಪೊಲೀಸರು ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುತ್ತಿದ್ದಾಗ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಮತ್ತೊಂದೆಡೆ, ಪೂನಂ ಪಾಂಡೆ ಜುಲೈ 19 ರಂದು ಜಂತರ್ ಮಂತರ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ದೀಪ್ಕೆ ಜೊತೆಗೆ ಗುರುತಿಸಿಕೊಂಡಿರುವ ವ್ಯಕ್ತಿಗಳು ತನ್ನ ಮೇಲೆ ಎರಡು ಬಾರಿ, ಮೊದಲು ಪುಣೆಯಲ್ಲಿ, ತದನಂತರ ಔರಂಗಾಬಾದ್‌ನಲ್ಲಿ - ಹಲ್ಲೆ ನಡೆಸಿದ್ದಾರೆ ಎಂದು ಅನ್ಸಾರಿ ಆರೋಪಿಸಿದ್ದಾರೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿದ್ದು, ದೀಪ್ಕೆ ಅವರನ್ನು "ತಕ್ಷಣವೇ" ಬಂಧಿಸುವಂತೆ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ (ANI) ಜೊತೆ ಮಾತನಾಡಿದ ಅನ್ಸಾರಿ, ದೂರಿನೊಂದಿಗೆ ದಾಖಲೆಗಳನ್ನೂ ಸಲ್ಲಿಸಿರುವುದಾಗಿ ತಿಳಿಸಿದರು. "ಸಿಜೆಪಿ (CJP) ಪಕ್ಷದ ಸ್ಥಾಪಕ ಅಭಿಜೀತ್ ದೀಪ್ಕೆ ಅವರ ವಿರುದ್ಧ ಇಂದು ದೆಹಲಿ ಡಿಸಿಪಿ (DCP) ಅವರಿಗೆ ಲಿಖಿತ ದೂರು ನೀಡಿದ್ದೇನೆ. ಅವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಾಕ್ಷ್ಯ ಇದೆ. ಪುಣೆ ಮತ್ತು ಔರಂಗಾಬಾದ್‌ನಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ. ಆ ಬಗ್ಗೆ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ. ದೆಹಲಿ ಪೊಲೀಸರು ದೀಪ್ಕೆ ಅವರನ್ನು ತಕ್ಷಣವೇ ಬಂಧಿಸಬೇಕೆಂದು ಬಯಸುತ್ತೇನೆ ಎಂದು ಅವರು ಹೇಳಿದರು.
ಸೋನಮ್ ವಾಂಗ್‌ಚುಕ್ ಅವರನ್ನು ವಶಕ್ಕೆ ಪಡೆದಿದ್ದಕ್ಕಾಗಿ ದೆಹಲಿ ಸರ್ಕಾರ ಮತ್ತು ಪೊಲೀಸರನ್ನು ಶ್ಲಾಘಿಸಿದ ಅನ್ಸಾರಿ, ಈ ಕ್ರಮದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು-ಸುವ್ಯವಸ್ಥೆ ಹದಗೆಡುವುದು ತಪ್ಪಿದೆ ಎಂದು ಹೇಳಿದರು.
ಸರಿಯಾದ ಸಮಯದಲ್ಲಿ ಸೋನಮ್ ವಾಂಗ್‌ಚುಕ್ ಅವರನ್ನು ವಶಕ್ಕೆ ಪಡೆದಿದ್ದಕ್ಕಾಗಿ ದೆಹಲಿ ಮುಖ್ಯಮಂತ್ರಿ ಮತ್ತು ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದಾಗಿ ದೆಹಲಿಯ ಪರಿಸ್ಥಿತಿ ಹದಗೆಡುವುದು ತಪ್ಪಿತು... ದೀಪ್ಕೆ ತಮ್ಮ ಸ್ವಂತ ಲಾಭಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.