ಶಶಿ ತರೂರ್ 
ದೇಶ

FCRA: 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ, ಸಾಮಾನ್ಯ ಭಾರತೀಯರೇ ದೊಡ್ಡ ಬೆಲೆ ತೆರಬೇಕಾಗುತ್ತದೆ': Shashi Tharoor

ಈ ಮಸೂದೆ ಕಾರ್ಯನಿರ್ವಾಹಕ ಅಧಿಕಾರವನ್ನು ಅಪಾಯಕಾರಿ ರೀತಿಯಲ್ಲಿ ಕೇಂದ್ರೀಕರಿಸುವ ಪ್ರಯತ್ನವಾಗಿದ್ದು, ಸರ್ಕಾರ ಮತ್ತು ನಾಗರಿಕ ಸಮಾಜದ ನಡುವಿನ ಸಂಬಂಧವನ್ನೇ ಮೂಲಭೂತವಾಗಿ ಬದಲಾಯಿಸುತ್ತದೆ..

ನವದೆಹಲಿ: ಕೇಂದ್ರ ಸರ್ಕಾರ ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ–2026 (FCRA Amendment Bill, 2026) ವಿರುದ್ಧ ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

FCRA ತಿದ್ದುಪಡಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದ್ದು, ಸಾಮಾನ್ಯ ಭಾರತೀಯರೇ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಈ ಮಸೂದೆ ಕಾರ್ಯನಿರ್ವಾಹಕ ಅಧಿಕಾರವನ್ನು ಅಪಾಯಕಾರಿ ರೀತಿಯಲ್ಲಿ ಕೇಂದ್ರೀಕರಿಸುವ ಪ್ರಯತ್ನವಾಗಿದ್ದು, ಸರ್ಕಾರ ಮತ್ತು ನಾಗರಿಕ ಸಮಾಜದ ನಡುವಿನ ಸಂಬಂಧವನ್ನೇ ಮೂಲಭೂತವಾಗಿ ಬದಲಾಯಿಸುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ.

'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ತರೂರ್, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ದತ್ತಿ ಸಂಸ್ಥೆಗಳು, ಚಿಂತಕರ ಸಂಸ್ಥೆಗಳು (Think Tanks) ಹಾಗೂ ಮಾನವ ಹಕ್ಕುಗಳ ಸಂಘಟನೆಗಳನ್ನು ಸರ್ಕಾರ ಅಭಿವೃದ್ಧಿಯ ಪಾಲುದಾರರಾಗಿ ನೋಡುವ ಬದಲು, ವಿದೇಶಿ ಪ್ರಭಾವದ ಮೂಲಗಳೆಂದು ಪರಿಗಣಿಸುತ್ತಿದೆ ಎಂದು ಟೀಕಿಸಿದ್ದಾರೆ.

ಲಾಭರಹಿತ ಸಂಸ್ಥೆಗಳು, ದತ್ತಿ ಟ್ರಸ್ಟ್‌ಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ಮುಖ್ಯ ಆಧಾರವಾಗಿರುವ ವಿದೇಶಿ ದೇಣಿಗೆಯನ್ನು ಗುರಿಯಾಗಿಸಿಕೊಂಡು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ಸಾವಿರಾರು ಸಂಸ್ಥೆಗಳು ಕಾರ್ಯಾಚರಣೆ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಿಸಿವೆ" ಎಂದು ಹೇಳಿದ್ದಾರೆ.

ಇಷ್ಟಕ್ಕೂ ಮಸೂದೆಯಲ್ಲಿ ಏನಿದೆ?

2026ರ ತಿದ್ದುಪಡಿ ಮಸೂದೆಯ ಪ್ರಕಾರ, ಯಾವುದೇ ಸಂಸ್ಥೆಯ FCRA ನೋಂದಣಿ ರದ್ದಾದರೆ, ಶರಣಾದರೆ ಅಥವಾ ನವೀಕರಣವಾಗದಿದ್ದರೆ, ಆ ಸಂಸ್ಥೆಗೆ ಬಂದಿರುವ ವಿದೇಶಿ ದೇಣಿಗೆ ಮತ್ತು ಅದರಿಂದ ನಿರ್ಮಿಸಲಾದ ಆಸ್ತಿಗಳ ನಿರ್ವಹಣೆಯನ್ನು ಸರ್ಕಾರ ನೇಮಿಸುವ ‘ನಿಯೋಜಿತ ಪ್ರಾಧಿಕಾರ’ (Designated Authority) ವಹಿಸಿಕೊಳ್ಳಲಿದೆ.

ಈ ಆಸ್ತಿಯು ಧಾರ್ಮಿಕ ಪೂಜಾ ಸ್ಥಳವಾಗಿದ್ದರೆ, ಅದರ ಧಾರ್ಮಿಕ ಸ್ವರೂಪವನ್ನು ಕಾಪಾಡುವ ಜವಾಬ್ದಾರಿಯೂ ಈ ಪ್ರಾಧಿಕಾರಕ್ಕಿರುತ್ತದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

‘ಶೇ.87ರಷ್ಟು ವಿದೇಶಿ ದೇಣಿಗೆ ಕುಸಿತ’

FCRA ಕಾಯ್ದೆಯಡಿ ಈಗಾಗಲೇ ಉಪ-ಅನುದಾನ (Sub-granting) ನಿಷೇಧ, ಆಡಳಿತ ವೆಚ್ಚದ ಮಿತಿ ಕಡಿತ ಹಾಗೂ ವಿದೇಶಿ ನಿಧಿ ಸ್ವೀಕರಿಸಲು ದೆಹಲಿಯ ಒಂದೇ ಬ್ಯಾಂಕ್ ಶಾಖೆಯನ್ನು ಕಡ್ಡಾಯಗೊಳಿಸುವಂತಹ ನಿಯಮಗಳಿಂದ ವಿದೇಶಿ ದೇಣಿಗೆಯಲ್ಲಿ ಶೇ.87ರಷ್ಟು ಕುಸಿತ ಉಂಟಾಗಿದೆ. ಇದರಿಂದ ಸಾವಿರಾರು ಧರ್ಮನಿರಪೇಕ್ಷ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳು ಮುಚ್ಚಲ್ಪಟ್ಟಿವೆ ಎಂದು ತರೂರ್ ಹೇಳಿದ್ದಾರೆ.

‘ಕೇರಳದ ಸಂಸ್ಥೆಗಳ ಮೇಲೆ ಪರಿಣಾಮ’

ಕೇರಳದಲ್ಲಿ ಕ್ರೈಸ್ತ ಸಮುದಾಯ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಸೇವಾ ಸಂಸ್ಥೆಗಳು ದಶಕಗಳಿಂದ ಜಾತಿ-ಧರ್ಮ ಭೇದವಿಲ್ಲದೆ ಜನರಿಗೆ ಸೇವೆ ಸಲ್ಲಿಸುತ್ತಿವೆ. ಇವು ಸ್ಥಳೀಯ ಆದಾಯದ ಜೊತೆಗೆ ವಿದೇಶಿ ದೇಣಿಗೆಯ ಮೇಲೂ ಅವಲಂಬಿತವಾಗಿವೆ. ಹೊಸ ತಿದ್ದುಪಡಿಯಿಂದ ಇಂತಹ ಸಂಸ್ಥೆಗಳ ಸ್ಥಿರತೆಗೆ ಧಕ್ಕೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಸರ್ಕಾರ ಆಸ್ತಿ ವಶಪಡಿಸಿಕೊಳ್ಳುವ ಅವಕಾಶ’

ಇದೇ ವೇಳೆ FCRA ಪರವಾನಗಿ ಕುರಿತ ಆಡಳಿತಾತ್ಮಕ ನಿರ್ಧಾರವನ್ನು ನೇರವಾಗಿ ಸಂಸ್ಥೆಯ ಭೂಮಿ ಮತ್ತು ಕಟ್ಟಡಗಳ ಸ್ವಾಧೀನಕ್ಕೆ ಜೋಡಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ತರೂರ್ ಹೇಳಿದ್ದಾರೆ.

ಒಂದು ಆಡಳಿತಾತ್ಮಕ ವಿಳಂಬ ಅಥವಾ ಗೃಹ ಸಚಿವಾಲಯದ ಪ್ರತಿಕೂಲ ಆದೇಶದಿಂದಲೇ 500 ಹಾಸಿಗೆಗಳ ದತ್ತಿ ಆಸ್ಪತ್ರೆಯೂ ಸರ್ಕಾರದ ಆಸ್ತಿಯಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕ ಸೇವೆಗಳು ಅಸ್ತವ್ಯಸ್ತವಾಗಲಿದ್ದು, ಅದರ ಹೊರೆ ಸಾಮಾನ್ಯ ಭಾರತೀಯರ ಮೇಲೆಯೇ ಬೀಳುತ್ತದೆ" ಎಂದು ಎಚ್ಚರಿಸಿದ್ದಾರೆ.

‘ಪ್ರಜಾಪ್ರಭುತ್ವ ವಿರೋಧಿ ಮಸೂದೆ’

ಈ ಮಸೂದೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ತರೂರ್, ಸಂಸತ್ತಿನಲ್ಲಿ ಈ ಮಸೂದೆಯನ್ನು ವಿರೋಧಿಸಲು ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಮಾಹಿತಿಯಂತೆ, 2019ರಿಂದ 2022ರ ನಡುವೆ 13,520 ಸಂಸ್ಥೆಗಳು ಒಟ್ಟು ರೂ.55,741 ಕೋಟಿ ವಿದೇಶಿ ದೇಣಿಗೆ ಪಡೆದಿವೆ. 2026ರ ಜುಲೈ 15ರ ವೇಳೆಗೆ 14,449 ಸಕ್ರಿಯ FCRA ಪ್ರಮಾಣಪತ್ರಗಳು, 22,498 ರದ್ದಾದ ಪ್ರಮಾಣಪತ್ರಗಳು ಹಾಗೂ 15,212 ಅವಧಿ ಮುಗಿದ ಪ್ರಮಾಣಪತ್ರಗಳು ದಾಖಲಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

2013ರ ಅತ್ಯಾಚಾರ ಪ್ರಕರಣ: ‘Tehelka’ ಮಾಜಿ ಸಂಪಾದಕ ತರುಣ್ ತೇಜಪಾಲ್ ದೋಷಿ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು..!

"ಪ್ರಧಾನಿ ಮೋದಿಗೆ ಅಷ್ಟೊಂದು ತಲೆಬಾಗಬೇಡಿ": Instagram ಖಾತೆ ನಿರ್ಬಂಧ ಬೆನ್ನಲ್ಲೇ Meta ವಿರುದ್ಧ ಕೇಜ್ರಿವಾಲ್ ಆಕ್ರೋಶ..!

ಯೆನ್ ರಕ್ಷಣೆಗೆ ಅಮೇರಿಕಾ-ಜಪಾನ್ ಜಂಟಿ ಕಾರ್ಯಾಚರಣೆ, ಜಾಗತಿಕ ಹಣಕಾಸು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ (ಹಣಕ್ಲಾಸು)

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ