ನವದೆಹಲಿ: ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆಗೆ ನಾಗ್ಪುರ ಮಹಿಳೆ ತುತ್ತಾಗಿದ್ದ ಪ್ರಕರಣವೊಂದು ಬಯಲಾಗಿದ್ದು, ಆಕೆಯನ್ನು ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಹೌದು.. ವಿದೇಶದಲ್ಲಿ ಉತ್ತಮ ವೇತನದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಪುಣೆಯ ಸಂಸ್ಥೆಯೊಂದು ನಾಗ್ಪುರದ 28 ವರ್ಷದ ಮಹಿಳೆಯನ್ನು ಪೋರ್ಚುಗಲ್‌ಗೆ ಕರೆದೊಯ್ದು, ಅಲ್ಲಿ ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿರುವ ಪ್ರಕರಣ ಇದಾಗಿದೆ. ಅಲ್ಲದೆ, ಆಕೆಯಿಂದ ಸುಮಾರು 11 ಲಕ್ಷ ರೂ. ಹಣವನ್ನೂ ವಸೂಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಕಳೆದ ತಿಂಗಳು ಇನ್‌ಸ್ಟಾಗ್ರಾಂ ಮೂಲಕ ಪುಣೆಯ ‘ವಿ ಮೈಗ್ರೇಟ್’ ಎಂಬ ಕನ್ಸಲ್ಟೆನ್ಸಿಯ ಬಗ್ಗೆ ಮಹಿಳೆಗೆ ಮಾಹಿತಿ ಸಿಕ್ಕಿತ್ತು. ಬಳಿಕ ಆ ಸಂಸ್ಥೆಯನ್ನು ಸಂಪರ್ಕಿಸಿದಾಗ, ಪೋರ್ಚುಗಲ್‌ನಲ್ಲಿ ಕ್ಯಾಷಿಯರ್ ಕೆಲಸ ಕೊಡಿಸುವುದಾಗಿ ಹಾಗೂ ತಿಂಗಳಿಗೆ 1.5 ಲಕ್ಷ ರೂ. ವೇತನ ಸಿಗಲಿದೆ. ದಿನಕ್ಕೆ ಕೇವಲ ಎಂಟು ಗಂಟೆ ಮಾತ್ರ ಕೆಲಸ ಮಾಡಬೇಕಾಗುತ್ತದೆ ಎಂದು ಏಜೆನ್ಸಿಯವರು ಭರವಸೆ ನೀಡಿದ್ದರು.
ಈ ಕೆಲಸದ ವಿಚಾರವಾಗಿ ವೀಸಾ ಹಾಗೂ ಇತರ ದಾಖಲೆಗಳ ಪ್ರಕ್ರಿಯೆಯ ಹೆಸರಿನಲ್ಲಿ ವಂಚಕರು ಮಹಿಳೆಯಿಂದ ಹಂತ ಹಂತವಾಗಿ ಒಟ್ಟು 11 ಲಕ್ಷ ರೂ. ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಪೋರ್ಚುಗಲ್ ಗೆ ತೆರಳಿದ್ದ ಮಹಿಳೆಗೆ ಕಾದಿತ್ತು ಆಘಾತ
ಮಹಿಳೆ ಪೋರ್ಚುಗಲ್‌ಗೆ ತಲುಪಿದ ಬಳಿಕ ‘ಏಜೆಂಟ್‌ಗಳು’ ಆಕೆಯ ಪಾಸ್‌ಪೋರ್ಟ್ ಕಸಿದುಕೊಂಡು ಎರಡು ದಿನಗಳ ಕಾಲ ಕೊಠಡಿಯೊಂದರಲ್ಲಿ ಬಂಧಿಸಿಟ್ಟಿದ್ದರು ಎಂದು ಆರೋಪಿಸಲಾಗಿದೆ.
ಬಳಿಕ ಮಹಿಳೆಯನ್ನು ಬಿಯರ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಲಾಗಿದ್ದು, ಅಲ್ಲಿ ಆಕೆಯನ್ನು ಬಲವಂತವಾಗಿ ಕೆಲಸ ಮಾಡಿಸಿ ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎನ್ನಲಾಗಿದೆ.
ಒಂದು ಹಂತದಲ್ಲಿ ತನ್ನ ಪಾಸ್‌ಪೋರ್ಟ್ ವಾಪಸ್ ನೀಡುವಂತೆ ಮಹಿಳೆ ವಂಚಕರನ್ನು ಕೇಳಿಕೊಂಡಿದ್ದಾರೆ. ಆದರೆ ಅವರು ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಹಿಂಸೆ ಅನುಭವಿಸಿದ ಬಳಿಕ ಮಹಿಳೆ ಅಲ್ಲಿಂದ ತಪ್ಪಿಸಿಕೊಳ್ಳುವ ಮಾರ್ಗ ಕಂಡುಕೊಂಡಿದ್ದಾರೆ.
ಮೊದಲು ಬಸ್‌ನಲ್ಲಿ ಲಿಸ್ಬನ್‌ಗೆ ತೆರಳಿದ ಆಕೆ, ಅಲ್ಲಿಂದ ಮ್ಯಾಡ್ರಿಡ್‌ಗೆ ಹೋಗಿದ್ದಾರೆ. ಬಳಿಕ ದೋಹಾ ಮಾರ್ಗವಾಗಿ ಭಾರತಕ್ಕೆ ವಾಪಸ್ ಬರುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತಕ್ಕೆ ವಾಪಸಾದ ಬಳಿಕವೂ ವಂಚನೆ
ಇನ್ನು ಮಹಿಳೆ ಭಾರತಕ್ಕೆ ಬಂದ ಬಳಿಕವೂ ವಂಚಕರು ಮಾಲ್ಟಾದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಮತ್ತೊಂದು 3 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡಲು ನಿರಾಕರಿಸಿದಾಗ, ಆಕೆಯ ಪತಿಯನ್ನು ಕೊಲ್ಲುವುದಾಗಿ ಹಾಗೂ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ಮಹಿಳೆ ಪುಣೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.
‘ವಿ ಮೈಗ್ರೇಟ್’ ಸಂಸ್ಥೆಯ ನಿರ್ವಾಹಕರು ಸೇರಿದಂತೆ ಎಂಟು ಆರೋಪಿಗಳ ವಿರುದ್ಧ ಮಾನವ ಕಳ್ಳಸಾಗಣೆ, ವಂಚನೆ ಮತ್ತು ಸುಲಿಗೆ ಆರೋಪದಡಿ ಈ ವಾರದ ಆರಂಭದಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.