ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನಡುವೆ ಶನಿವಾರ ಬೆಳಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಾಕ್ಸಮರ ನಡೆಯಿತು. ಮಹಿಳಾ ಶಕ್ತಿಯ ಕುರಿತು ರಾಹುಲ್ ಗಾಂಧಿ ಹಂಚಿಕೊಂಡಿದ್ದ ವಿಡಿಯೋ ಸಂದೇಶವನ್ನು ಉಲ್ಲೇಖಿಸಿ ಕಾಂಗ್ರೆಸ್ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡಬೇಕು ಎಂದು ರಿಜಿಜು ಹೇಳಿದರೆ, 2023ರಲ್ಲಿ ಅಂಗೀಕರಿಸಲಾದ ಕಾನೂನನ್ನು ಸರ್ಕಾರ ಇನ್ನೂ ಏಕೆ ಜಾರಿಗೆ ತಂದಿಲ್ಲ ಎಂದು ರಾಹುಲ್ ಗಾಂಧಿ ತಿರುಗೇಟು ನೀಡಿದರು.
ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಒಂದು ವಿಡಿಯೊ ಹಂಚಿಕೊಂಡಿದ್ದರು. ಮಹಿಳೆಯರನ್ನು ಮತ್ತೆ ಚರ್ಚೆಯ ಕೇಂದ್ರಕ್ಕೆ ತರುವುದು ಮತ್ತು ಅವರು ತಮಗೆ ಬೇಕಾದುದನ್ನು ಮಾಡಲು ಅವಕಾಶ ನೀಡುವುದು ಇಂದು ಮುಖ್ಯವಾಗಿದೆ ಎಂದು ಹೇಳಿದ್ದರು.
ರಾಹುಲ್ ಗಾಂಧಿ ಅವರ ವಿಡಿಯೋಗೆ ಪ್ರತಿಕ್ರಿಯಿಸಿದ ರಿಜಿಜು, ಅದನ್ನು ಸಕಾರಾತ್ಮಕ ಸಂದೇಶ ನೀಡಿದ್ದೀರಿ, ಇದು ಮನಃಪರಿವರ್ತನೆಯೇ ಎಂದು ಪ್ರಶ್ನಿಸಿದರು.
ಇದು ಕಾಂಗ್ರೆಸ್ ಪಕ್ಷದಿಂದ ಬಂದಿರುವ ಸಕಾರಾತ್ಮಕ ಸಂದೇಶದಂತೆ ಕಾಣುತ್ತಿದೆ. ರಾಹುಲ್ ಗಾಂಧಿ ಅವರ ಮಹಿಳೆಯರ ಕುರಿತ ನಿಲುವಿನಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತಿದೆ ಎಂದು ರಿಜಿಜು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದರು.
ಇದರ ಬೆನ್ನಲ್ಲೇ, ಪ್ರತಿಪಕ್ಷ ನಾಯಕನಿಗೆ ಮಹಿಳಾ ಮೀಸಲಾತಿಯ ವಿಚಾರವನ್ನೂ ಅವರು ಮುಂದಿಟ್ಟರು.
ಈಗ ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ಮಸೂದೆಗೆ ಯಾವುದೇ ಷರತ್ತುಗಳಿಲ್ಲದೆ ಬೆಂಬಲ ನೀಡಲಿದೆ ಎಂದು ನಾನು ಆಶಿಸುತ್ತೇನೆ ಎಂದು ರಿಜಿಜು ಹೇಳಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ (Delimitation) ಕೇಂದ್ರ ಸರ್ಕಾರ ಏಕೆ ಜೋಡಿಸುತ್ತಿದೆ ಎಂದು ಪ್ರಶ್ನಿಸಿದರು.
ರಿಜಿಜು ಅವರೇ, ಸಂಸದೀಯ ವ್ಯವಹಾರಗಳ ಸಚಿವರಾಗಿ ನಿಮಗಿಂತ ಈ ವಿಚಾರವನ್ನು ಚೆನ್ನಾಗಿ ತಿಳಿದವರು ಯಾರಿದ್ದಾರೆ? 2023ರ ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಸರ್ವಾನುಮತದಿಂದ ಅಂಗೀಕಾರಗೊಂಡಿದ್ದು, ಕಾಂಗ್ರೆಸ್‌ನ ಸಂಪೂರ್ಣ ಬೆಂಬಲವೂ ಅದಕ್ಕೆ ಇದೆ. ಹಾಗಿದ್ದರೂ ಮೂರು ವರ್ಷಗಳಾದರೂ ಅದನ್ನು ಏಕೆ ಜಾರಿಗೆ ತಂದಿಲ್ಲ? ಈಗ ಅದನ್ನು ಅನಗತ್ಯವಾಗಿ ಕ್ಷೇತ್ರ ಪುನರ್‌ವಿಂಗಡಣೆಯೊಂದಿಗೆ ಏಕೆ ಜೋಡಿಸಲು ಬಯಸುತ್ತಿದ್ದೀರಿ?” ಎಂದು ರಿಜಿಜು ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪ್ರಶ್ನಿಸಿದರು.
ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತರುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. 2023ರ ಕಾನೂನನ್ನು ಜಾರಿಗೆ ತನ್ನಿ ಯಾವುದೇ ಷರತ್ತುಗಳಿಲ್ಲದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿಯನ್ನು ಅದರೊಂದಿಗೆ ಜೋಡಿಸುವ ಕೇಂದ್ರ ಸರ್ಕಾರದ ಪ್ರಯತ್ನದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ.
ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯನ್ನು ವಿರೋಧಿಸುತ್ತಿದ್ದು, ಪ್ರಸ್ತುತ ಇರುವ ಸಂಸತ್ ಸದಸ್ಯರ ಸಂಖ್ಯೆಯ ಆಧಾರದಲ್ಲೇ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿವೆ.
ಈ ಹಿಂದೆ ಸಂಸತ್‌ನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ಶೇ.33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆಯನ್ನು ಮುಂದಕ್ಕೆ ಕೊಂಡೊಯ್ಯಲು ಸರ್ಕಾರ ಪ್ರಯತ್ನಿಸುತ್ತಿದೆ.
ಇನ್‌ಸ್ಟಾಗ್ರಾಂನಲ್ಲಿ ರಾಹುಲ್ ಗಾಂಧಿ ಮಾಡಿರುವ ಹೇಳಿಕೆ, ಗುರುವಾರ ನಡೆದ ಅವರ “ಆಸ್ಕ್ ಮಿ ಎನಿಥಿಂಗ್” ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ನೀಡಿದ್ದ ಉತ್ತರದ ಮುಂದುವರಿದ ಭಾಗವಾಗಿದೆ. ಭಾರತದ ಮಹಿಳೆಯರ ಶಕ್ತಿ ಸಿಲುಕಿ ಹಾಕಿಕೊಂಡಿದೆ. ಅದನ್ನು ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡಲಾಗುತ್ತಿಲ್ಲ, ಕನಸು ಕಾಣಲೂ ಅವಕಾಶ ನೀಡಲಾಗುತ್ತಿಲ್ಲ ಎಂದು ನಾನು ನನ್ನೊಳಗೇ ಯೋಚಿಸುತ್ತಿದ್ದೆ ಎಂದಿದ್ದರು.
ಒಂದು ದೇಶದ ಮಹಿಳೆಯರು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಆ ದೇಶ ಯಶಸ್ವಿಯಾಗಲು ಸಾಧ್ಯವಿಲ್ಲ. ನಮ್ಮ ದೇಶದ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸದೆ ಭಾರತ ಅಪೂರ್ಣವಾಗಿದೆ, ಅದರ ಪ್ರಗತಿ ಕುಂಠಿತವಾಗಿದೆ ಎಂಬುದನ್ನು ಜನರಿಗೆ ಅರ್ಥಮಾಡಿಸುವುದೇ ನನ್ನ ರಾಜಕೀಯದ ಬಹುಪಾಲು ಮತ್ತು ಈ ದೇಶದ ರಾಜಕೀಯದ ಬಹುಪಾಲು ಆಗಿರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದರು.
ಮಹಿಳೆಯರು ಉದ್ಯಮ ಅಥವಾ ರಾಜಕೀಯ ವ್ಯವಸ್ಥೆಯಲ್ಲಿ ಯಶಸ್ವಿಯಾಗುವುದು ಮಾತ್ರ ಇದರ ಉದ್ದೇಶವಲ್ಲ. ಅವರು ತಮ್ಮ ಮನೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಮತ್ತು ಯಾವುದೇ ಭಯವಿಲ್ಲದೆ ಬೀದಿಗಳಲ್ಲಿ ಸಂಚರಿಸಲು ಸಾಧ್ಯವಾಗಬೇಕು ಎಂದು ಹೇಳಿದ್ದರು.
ಇತರರಿಗೆ ಒಪ್ಪಿಗೆಯಾಗದ ಅಭಿಪ್ರಾಯವನ್ನು ವ್ಯಕ್ತಪಡಿಸುವುದಾಗಿರಬಹುದು. ತಮ್ಮ ಪೋಷಕರು, ಪತಿ, ಸಹೋದರ, ಸಹೋದರಿ ಅಥವಾ ಇತರರನ್ನು ಪ್ರಶ್ನಿಸುವುದಾಗಿರಬಹುದು. ಹೀಗಾಗಿ, ಭಾರತ ನಿಜವಾಗಿಯೂ ಅಭಿವೃದ್ಧಿ ಹೊಂದಬೇಕಾದರೆ ಪಿತೃಪ್ರಧಾನ ವ್ಯವಸ್ಥೆಯಿಂದ, ಭಾರತದ ಪುರುಷರು ಮಹಿಳೆಯರ ಮೇಲೆ ಹೇರುವ ಕಠಿಣ ನಿಯಂತ್ರಣದಿಂದ ಒಂದು ನಿರ್ದಿಷ್ಟ ಮಟ್ಟದ ಸ್ವಾತಂತ್ರ್ಯ ಅಗತ್ಯ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತದ ಮಹಿಳೆಯರು ನಮ್ಮ ಶಕ್ತಿ, ನಮ್ಮ ಅತಿದೊಡ್ಡ ಸಂಪತ್ತು. ದೇಶದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ, ಶಿಕ್ಷಣ ವ್ಯವಸ್ಥೆಯಲ್ಲಿ ಅವರಿಗೆ ನೀಡಲಾಗುತ್ತಿರುವ ಸ್ಥಾನಮಾನ ಹಾಗೂ ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಅವರ ಪರಿಸ್ಥಿತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.