ಆರ್‌ಎಸ್‌ಎಸ್‌ ಸಿದ್ಧಾಂತವಾದಿ ಹಾಗೂ ರಾಜಕೀಯ ವಿಶ್ಲೇಷಕ ಟಿ.ಜಿ. ಮೋಹನ್‌ದಾಸ್‌ 
ದೇಶ

‘ಎಚ್ಚರಿಕೆ ಬಳಿಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಿದ್ದೆ’: CJP ಪ್ರತಿಭಟನೆ ಕುರಿತು RSS ಸಿದ್ಧಾಂತವಾದಿ ಮೋಹನ್‌ದಾಸ್‌ ವಿವಾದಾತ್ಮಕ ಹೇಳಿಕೆ, ಬಂಧನ

ಜಂತರ್‌ ಮಂತರ್‌ ಪ್ರದೇಶದ ಜವಾಬ್ದಾರಿ ತಮ್ಮ ಕೈಯಲ್ಲಿದ್ದರೆ, ಪ್ರತಿಭಟನಾ ಸ್ಥಳದ ಸುತ್ತ ನಾಲ್ಕು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸುತ್ತಿದ್ದೆ. ಪ್ರತಿಭಟನಾಕಾರರಿಗೆ ಮೂರು ಬಾರಿ ಸ್ಥಳದಿಂದ ತೆರಳುವಂತೆ ಎಚ್ಚರಿಕೆ ನೀಡಿದ ಬಳಿಕ ಗುಂಡು ಹಾರಿಸಲು ಪೊಲೀಸರಿಗೆ ಸೂಚಿಸುತ್ತಿದ್ದೆ.

ತಿರುವನಂತಪುರಂ: ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಳೆದ ತಿಂಗಳು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆರ್‌ಎಸ್‌ಎಸ್‌ ಸಿದ್ಧಾಂತವಾದಿ ಹಾಗೂ ರಾಜಕೀಯ ವಿಶ್ಲೇಷಕ ಟಿ.ಜಿ. ಮೋಹನ್‌ದಾಸ್‌ ಅವರನ್ನು ತಿರುವನಂತಪುರಂ ನಗರ ಸೈಬರ್‌ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ಕೊಚ್ಚಿಯ ಮ್ಯಾಟಂಚೇರಿಯಲ್ಲಿರುವ ಅವರ ನಿವಾಸದಲ್ಲಿ ಶೋಧ ನಡೆಸಿದ ಬಳಿಕ ಅವರನ್ನು ವಶಕ್ಕೆ ಪಡೆಯಲಾಯಿತು. ನಂತರ ತಿರುವನಂತಪುರಕ್ಕೆ ಕರೆತಂದು ಅಧಿಕೃತವಾಗಿ ಬಂಧನ ದಾಖಲಿಸಲಾಯಿತು.

ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಅವಹೇಳನಕಾರಿ ಹಾಗೂ ಹಿಂಸೆಗೆ ಪ್ರಚೋದಿಸುವ ರೀತಿಯಲ್ಲಿ ಮಾತನಾಡಿದ ಆರೋಪದ ಮೇಲೆ ಸೈಬರ್‌ ಪೊಲೀಸರು ಈ ಹಿಂದೆ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೊಗಳಲ್ಲಿ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳು ಹಾಗೂ ಪ್ರತಿಭಟನಾಕಾರರನ್ನು ಗುಂಡಿಕ್ಕುವ ಬೆದರಿಕೆ ಸೇರಿದಂತೆ ಹಲವು ವಿವಾದಾತ್ಮಕ ಹೇಳಿಕೆಗಳನ್ನು ಮೋಹನ್‌ದಾಸ್‌ ನೀಡಿದ್ದಾರೆ ಎನ್ನಲಾಗುತ್ತಿದ್ದು, ಈ ಹೇಳಿಕೆಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದವು.

ಜಂತರ್‌ ಮಂತರ್‌ ಪ್ರದೇಶದ ಜವಾಬ್ದಾರಿ ತಮ್ಮ ಕೈಯಲ್ಲಿದ್ದರೆ, ಪ್ರತಿಭಟನಾ ಸ್ಥಳದ ಸುತ್ತ ನಾಲ್ಕು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸುತ್ತಿದ್ದೆ. ಪ್ರತಿಭಟನಾಕಾರರಿಗೆ ಮೂರು ಬಾರಿ ಸ್ಥಳದಿಂದ ತೆರಳುವಂತೆ ಎಚ್ಚರಿಕೆ ನೀಡಿದ ಬಳಿಕ ಗುಂಡು ಹಾರಿಸಲು ಪೊಲೀಸರಿಗೆ ಸೂಚಿಸುತ್ತಿದ್ದೆ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಇಷ್ಟೇ ಅಲ್ಲದೆ, ಹಲವು ಪ್ರತಿಭಟನಾಕಾರರನ್ನು ಕೊಲ್ಲಬೇಕು ಅಥವಾ ಗಂಭೀರವಾಗಿ ಗಾಯಗೊಳಿಸಬೇಕು ಹಾಗೂ ಅವರ ಮೃತದೇಹಗಳನ್ನು ಆಸ್ಪತ್ರೆಗೆ ಕಳುಹಿಸಬೇಕು ಎಂಬ ರೀತಿಯ ಹೇಳಿಕೆಗಳನ್ನೂ ಅವರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ತಿರುವನಂತಪುರಂ ಸೈಬರ್‌ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್‌ 192 ಹಾಗೂ 353(1)(b), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 66 ಮತ್ತು ಕೇರಳ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 120(o) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳ ಸಂಘಟನೆ ಎಸ್‌ಎಫ್‌ಐ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಸ್‌ಎಫ್‌ಐ, ಕೇರಳ ಗೃಹ ಸಚಿವ ರಮೇಶ್‌ ಚೆನ್ನಿತ್ತಲ ಹಾಗೂ ರಾಜ್ಯ ಪೊಲೀಸ್‌ ಮುಖ್ಯಸ್ಥ ರವಾಡ ಚಂದ್ರಶೇಖರ್‌ ಅವರಿಗೆ ದೂರು ಸಲ್ಲಿಸಿತ್ತು.

ಮೋಹನ್‌ದಾಸ್‌ ಅವರ ಹೇಳಿಕೆಗಳು ಕೇವಲ ರಾಜಕೀಯ ಅಭಿಪ್ರಾಯಕ್ಕೆ ಸೀಮಿತವಾಗಿಲ್ಲ. ಅವು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದು, ಮಾನವ ಜೀವದ ಮೌಲ್ಯವನ್ನು ಕುಗ್ಗಿಸುವುದು, ಸಾರ್ವಜನಿಕರಲ್ಲಿ ಭಯ ಮೂಡಿಸುವುದು ಹಾಗೂ ಶಾಂತಿಯುತ ಪ್ರತಿಭಟನೆ ನಡೆಸುವ ಪ್ರಜಾಸತ್ತಾತ್ಮಕ ಹಕ್ಕಿಗೆ ಬೆದರಿಕೆ ಹಾಕುವಂತಿವೆ ಎಂದು ಎಸ್‌ಎಫ್‌ಐ ಆರೋಪಿಸಿದೆ.

ಮಹಿಳಾ ಪ್ರತಿಭಟನಾಕಾರರ ಕುರಿತೂ ಮೋಹನ್‌ದಾಸ್‌ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹಾಗೂ ಲೈಂಗಿಕ ಹಿಂಸೆಯನ್ನು ಸಮರ್ಥಿಸುವ ರೀತಿಯ ಹೇಳಿಕೆಗಳನ್ನು ಅವರು ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಹೇಳಿಕೆಗಳ ವಿರುದ್ಧ ಎಸ್‌ಎಫ್‌ಐ, ಎಐಎಸ್‌ಎಫ್‌ ಹಾಗೂ ಡಿವೈಎಫ್‌ಐ ಸಂಘಟನೆಗಳು ಪ್ರತಿಭಟನೆ ನಡೆಸಿ, ಮೋಹನ್‌ದಾಸ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.

ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ (AIDWA) ಕೂಡ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದು, ಇಂತಹ ಹೇಳಿಕೆಗಳು ಆರ್‌ಎಸ್‌ಎಸ್‌ ಸಿದ್ಧಾಂತವಾದಿಯ ‘ಮನುವಾದಿ’ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಟೀಕಿಸಿದೆ.

ಆರ್‌ಎಸ್‌ಎಸ್‌ ಅಂತರ

ಈ ನಡುವೆ ಮೋಹನ್‌ದಾಸ್‌ ಅವರ ಹೇಳಿಕೆಗಳಿಂದ ಆರ್‌ಎಸ್‌ಎಸ್‌ ಕೂಡ ಅಂತರ ಕಾಯ್ದುಕೊಂಡಿದೆ. ಅವರ ಹೇಳಿಕೆಗಳು ವೈಯಕ್ತಿಕ ಅಭಿಪ್ರಾಯವಾಗಿದ್ದು, ಸಂಘಟನೆ ಅವುಗಳನ್ನು ಬೆಂಬಲಿಸುವುದಿಲ್ಲ ಎಂದು ಆರ್‌ಎಸ್‌ಎಸ್‌ ನಾಯಕ ಕೆ.ಬಿ. ಶ್ರೀಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಮೋಹನ್‌ದಾಸ್‌ ಅವರ ಹೇಳಿಕೆಗಳನ್ನು ಸಂಘಟನೆ ಖಂಡಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಮುಂಬೈ: ಬಾಲಿವುಡ್ ನಟಿಯ ಮೇಲೆ ಅತ್ಯಾಚಾರ ಆರೋಪ; 73 ವರ್ಷದ ಖ್ಯಾತ ಸಿನಿಮಾ ಡೈರೆಕ್ಟರ್ ಬಂಧನ!

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!