ನವದೆಹಲಿ: ಇತ್ತೀಚಿಗೆ ನೀಟ್ ಪರೀಕ್ಷೆಯಲ್ಲಿ ಅಕ್ರಮ ಕುರಿತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ CJP ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ Gen-z ಗಳನ್ನು Gutter ಎಂದು ಟೀಕಿಸಿ ತೀವ್ರ ವಿವಾದಕ್ಕೀಡಾಗಿದ್ದ ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸತ್ ಸದಸ್ಯೆ ಕಂಗನಾ ರಣಾವತ್, 80ನೇ ಸ್ವಾತಂತ್ರ್ಯ ದಿನಾಚರಣೆಗೆ ಮಾಡಿರುವ ಶುಭಾಶಯ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.
ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿನ ವ್ಯಾಕರಣ ದೋಷ ನೆಟ್ಟಿಗರಿಗೆ ಅಸ್ತ್ರವಾಗಿದ್ದು, ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ನಟಿಯ ಕಾಲೆಳೆಯುತ್ತಿದ್ದಾರೆ.
"Happy Independence Day" (ಹ್ಯಾಪಿ ಇಂಡಿಪೆಂಡೆನ್ಸ್ ಡೇ) ಎಂದು ಬರೆಯುವ ಬದಲು "Happy Independent Day" (ಹ್ಯಾಪಿ ಇಂಡಿಪೆಂಡೆಂಟ್ ಡೇ) ಎಂದು ಬರೆಯುವ ಮೂಲಕ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಭಾರತೀಯ ಧ್ವಜವನ್ನು ಬೀಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿರುವ ಕಂಗನಾ, ಅದರೊಂದಿಗೆ "Happy Independent Day" ಎಂಬ ಸಂದೇಶವನ್ನು ಬರೆದಿದ್ದರು. ಅಷ್ಟೇ ಅಲ್ಲದೇ, ಇದೇ ಶುಭಾಶಯವನ್ನು 'X' (ಹಿಂದಿನ ಟ್ವಿಟರ್) ನಲ್ಲೂ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟ್ ಅನ್ನು ಹಂಚಿಕೊಳ್ಳುವಾಗಲೂ ಕಂಗನಾ ಮತ್ತೊಮ್ಮೆ "Happy Independent Day" ಎಂದೇ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು, "ಮೇಡಂ, ನಿಮಗೆ 'Independence' (ಸ್ವಾತಂತ್ರ್ಯ) ಪದದ ಸರಿಯಾದ ಕಾಗುಣಿತವಾದರೂ ಗೊತ್ತಿದೆಯೇ?" ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಬಳಕೆದಾರ ಆಂಟಿ, ಅದು ಇಂಡಿಪೆಂಡೆಂಟ್ ಅಲ್ಲ, ಇಂಡಿಪೆಂಡೆನ್ಸ್ ಡೇ ಎಂದು ಬರೆಯುವ ಮೂಲಕ ಟೀಕಿಸುತ್ತಿದ್ದಾರೆ.