ರಾಯಪುರ: ಒಂದಲ್ಲಾ ಒಂದು ದಿನ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ಭಾರತದ ಭಾಗವಾಗಲಿವೆ ಎಂದು ಯೋಗ ಗುರು ಬಾಬಾ ರಾಮದೇವ್ ಸೋಮವಾರ ಹೇಳಿದ್ದಾರೆ.
ಇಲ್ಲಿನ ಸ್ವಾಮಿ ವಿವೇಕನಾನಂದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಿಂದೂ ಧರ್ಮವಾಗಲೀ, ಮುಸ್ಲಿಂ ಅಥವಾ ಕ್ರೈಸ್ತ ಧರ್ಮವಾಗಲೀ ಅಪಾಯದಲ್ಲಿ ಇಲ್ಲ. ಅಪಾಯದಲ್ಲಿ ಇರುವುದು ಭಾರತದ ಘನತೆ ಮತ್ತು ಗೌರವ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಹಿಂದೂ ಧರ್ಮೀಯರ ಸ್ಥಿತಿಗತಿ ಕುರಿತು ಅಲ್ಲಿನ ಅಧ್ಯಕ್ಷ ಆಸಿಪ್ ಅಲಿ ಜರ್ದಾರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮದೇವ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದಿದ್ದಾರೆ.
ಸ್ವಲ್ಪ ತಾಳ್ಮೆಯಿಂದ ಕಾಯಿರಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದ ಎಂದು ಹೇಳಿದ್ದಾರೆ.
ಭಾರತ ವಿಶ್ವದ ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಅಭಿವೃದ್ಧಿಯಾಗಬೇಕು. ಅಮೆರಿಕ, ಚೀನಾ ಮತ್ತು ರಷ್ಯಾ ಸೇರಿದಂತೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಭಾರತಕ್ಕೆ ಸಮಾನ ಗೌರವ ಸಿಗಬೇಕು ಎಂದಿದ್ದಾರೆ.