ಮುಂಬೈ: ಮಹಾರಾಷ್ಟ್ರದ ಎರಡು ಪಟ್ಟಣಗಳನ್ನು ಸಂಪರ್ಕಿಸುವ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿನ ವಿಳಂಬ ಹಾಗೂ ಮದ್ಯಪಾನದ ಪ್ರಮಾಣದಲ್ಲಿನ ಹೆಚ್ಚಳಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಕಾರಣ ಎಂದು ರಾಜ್ಯದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಅಹಮದ್‌ನಗರದ ಮಾಜಿ ಸಂಸದ ಸುಜಯ್ ವಿಖೆ ಪಾಟೀಲ್, ಮೂಲಸೌಕರ್ಯ ಯೋಜನೆಗೆ ಅಗತ್ಯವಿರುವ ಸಾಮಗ್ರಿಗಳ ಕೊರತೆಗೆ ಟ್ರಂಪ್ ಅವರ 'ಕೆಟ್ಟ' ನೀತಿಗಳೇ ಕಾರಣ ಎನ್ನುವ ಮೂಲಕ ವಿಸ್ತೃತವಾದ ವಾದವೊಂದನ್ನು ಮಂಡಿಸಿದ್ದಾರೆ.
'ನನ್ನ ಜೀವಮಾನದಲ್ಲಿ ಇಂತಹ ವಿಚಿತ್ರ ವ್ಯಕ್ತಿಯನ್ನು ನಾನು ಎಂದಿಗೂ ನೋಡಿಲ್ಲ ಎಂದು ದೇವರಾಣೆಗೂ ಹೇಳಬಲ್ಲೆ. ಬೆಳಿಗ್ಗೆ 'ನಿಲ್ಲಿಸಿ' ಎಂದು ಹೇಳುತ್ತಾರೆ, ಸಂಜೆ ಮತ್ತೆ ಬಾಂಬ್ ಸಿಡಿಸುತ್ತಾರೆ... ಆ ವ್ಯಕ್ತಿಯ ವಿಷಯದಲ್ಲಿ ನಾವು ತಲೆ ಹಾಕದಿರುವುದೇ ಒಳ್ಳೆಯದು' ಎಂದು ಬಿಜೆಪಿ ನಾಯಕ ಹೇಳಿದರು.
ಅಹಲ್ಯಾನಗರ-ಮನ್ಮಾಡ್ ರಸ್ತೆ ಯೋಜನೆ ಕುರಿತು ಮಾತನಾಡಿದ ಅವರು, 'ಡಾಂಬರು ಲಭ್ಯವಿಲ್ಲದ ಕಾರಣ, ಗುತ್ತಿಗೆದಾರರು ಅದನ್ನು ದೆಹಲಿಯಿಂದ ವಾಹನದ ಮೂಲಕ ಸಾಗಿಸಬೇಕಾಗಿದೆ. ಇದರಿಂದ ವೆಚ್ಚವು ಎರಡೂವರೆ ಪಟ್ಟು ಹೆಚ್ಚಾಗಿದೆ ಮತ್ತು ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆಗಳೂ ಅಗತ್ಯವಿವೆ. ಇವೆಲ್ಲವೂ ತಾಂತ್ರಿಕ ಸಮಸ್ಯೆಗಳು... ನೀವು ಎದುರಿಸುತ್ತಿರುವ ಸಮಸ್ಯೆಗಳೇ ನಾನೂ ಎದುರಿಸುತ್ತಿರುವ ಸಮಸ್ಯೆಗಳು' ಎಂದು ಹೇಳಿದರು.
'ಟ್ರಂಪ್ ಅವರ ಕ್ರಮಗಳಿಂದ ಉಂಟಾದ ಗೊಂದಲದ ಕಾರಣ, ಕೆಲವು ಜನರು ಸೇವಿಸುವ ಮದ್ಯದ ಪ್ರಮಾಣ ಹೆಚ್ಚಾಗಿದೆ' ಎಂದು ಅವರು ಹೇಳಿದರು.
ಅಮೆರಿಕ-ಇರಾನ್ ನಡುವಿನ ಸಂಘರ್ಷವು ಜಾಗತಿಕ ಇಂಧನ ಪೂರೈಕೆ ಮೇಲೆ ಪರಿಣಾಮ ಬೀರಿದೆ; ಇದರ ಪರಿಣಾಮವಾಗಿ ಪ್ರಮುಖ ಜಲಮಾರ್ಗವಾದ 'ಹಾರ್ಮುಜ್ ಜಲಸಂಧಿ' ಸಾಮಾನ್ಯ ಸಂಚಾರಕ್ಕೆ ಮುಚ್ಚಲ್ಪಟ್ಟಿದೆ. ಎಲ್ಲೆಡೆ ಕಚ್ಚಾ ತೈಲದ ಕೊರತೆಯು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ; ರಸ್ತೆ ಕಾಮಗಾರಿಗಳಲ್ಲಿ ಬಳಸಲಾಗುವ ಬಿಟುಮೆನ್ (ಡಾಂಬರು) ತೈಲ ಸಂಸ್ಕರಣಾ ಪ್ರಕ್ರಿಯೆಯ ಉಪ-ಉತ್ಪನ್ನವಾಗಿದೆ.
ಟ್ರಂಪ್ ಅವರ ಕೆಟ್ಟ ನೀತಿಗಳು ಮತ್ತು ಮಹಾರಾಷ್ಟ್ರದಲ್ಲಿ ರಸ್ತೆ ಕಾಮಗಾರಿಗಳು ಎದುರಿಸುತ್ತಿರುವ ಸ್ಥಳೀಯ ಮಟ್ಟದ ಸಮಸ್ಯೆಗಳ ನಡುವಿನ ಕೊಂಡಿ ಇದಾಗಿದೆ ಎಂದು ಮಹಾರಾಷ್ಟ್ರದ ಸಚಿವ ರಾಧಾಕೃಷ್ಣ ವಿಖೆ-ಪಾಟೀಲ್ ಅವರ ಪುತ್ರ ಪಾಟೀಲ್ ಹೇಳಿದ್ದಾರೆ.
ಇದೇ ವೇಳೆ, ತಮ್ಮ ದೇಶದ ಸಶಸ್ತ್ರ ಪಡೆಗಳು 'ಪರಿವರ್ತನಾಶೀಲ ವಿಧಾನಗಳನ್ನು' ಅಳವಡಿಸಿಕೊಳ್ಳಲು ಮತ್ತು ಸೂಕ್ತ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿರುವುದರಿಂದ, ತಮ್ಮ ರಕ್ಷಣಾ ನೀತಿಯು ರಕ್ಷಣಾತ್ಮಕ ನಿಲುವಿನಿಂದ ಆಕ್ರಮಣಕಾರಿ ನಿಲುವಿನತ್ತ ಬದಲಾಗುತ್ತಿದೆ ಎಂದು ಇರಾನ್ ಹೇಳಿದೆ ಎಂದು ಇರಾನ್‌ನ 'ಫಾರ್ಸ್ ನ್ಯೂಸ್ ಏಜೆನ್ಸಿ' ವರದಿ ಮಾಡಿದೆ.
ಈ ಬದಲಾವಣೆಯು ಇರಾನ್‌ನ ಮಿಲಿಟರಿ ಕಾರ್ಯತಂತ್ರದ ಸಿದ್ಧಾಂತದಲ್ಲಿ ಮಹತ್ವದ ಪರಿವರ್ತನೆಯನ್ನು ಸೂಚಿಸುತ್ತದೆ ಎಂದು ಅಲ್ ಜಜೀರಾ ವರದಿ ಮಾಡಿದ್ದು, 'ಕಾರ್ಯತಂತ್ರದ ಅಚ್ಚರಿಗಳನ್ನು ನಿರೀಕ್ಷಿಸುವಂತೆ' ಟೆಹ್ರಾನ್ ತನ್ನ ಎದುರಾಳಿಗಳಿಗೆ ಎಚ್ಚರಿಕೆ ನೀಡಿದೆ.