ಲಖಿಂಪುರ: ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ 25 ವರ್ಷದ ಯುವಕನೊಬ್ಬ ಕುದಿಯುತ್ತಿದ್ದ ಬೆಲ್ಲದ ಪಾಕದ ಬಾಣಲೆಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಆಗಸ್ಟ್ 21ರಂದು ಮಹಾರಾಷ್ಟ್ರದ ಬೆಲ್ಲ ತಯಾರಿಕಾ ಘಟಕದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಭಾನುವಾರ ರಾತ್ರಿ 9ರ ಸುಮಾರಿಗೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸುಮಾರು ಒಂದು ನಿಮಿಷದ ಕಾಲ ಕುದಿಯುತ್ತಿದ್ದ ಬೆಲ್ಲದ ಪಾಕದಲ್ಲೇ ಸಿಲುಕಿದ್ದ ಯುವಕ, “ಅಣ್ಣಾ, ಕಾಪಾಡಿ... ಕಾಪಾಡಿ” ಎಂದು ಕೂಗುತ್ತಿದ್ದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತ ಯುವಕನನ್ನು ಲಖಿಂಪುರದ ಈಸಾನಗರದ ಮೂಡಿ ಗ್ರಾಮದ ನಿವಾಸಿ ದಾನಿಶ್ (25) ಎಂದು ಗುರುತಿಸಲಾಗಿದೆ. ದಾನಿಶ್ ಉದ್ಯೋಗಕ್ಕಾಗಿ ಸುಮಾರು ನಾಲ್ಕು ತಿಂಗಳ ಹಿಂದೆ 15 ಮಂದಿ ಕಾರ್ಮಿಕರೊಂದಿಗೆ ಮಹಾರಾಷ್ಟ್ರಕ್ಕೆ ತೆರಳಿದ್ದರು. ಕುಟುಂಬದ 70 ಸಾವಿರ ರೂ ಸಾಲ ತೀರಿಸಲು ಸಹಾಯ ಮಾಡುವ ಉದ್ದೇಶದಿಂದ ಅವರು ದುಡಿಯಲು ಹೋಗಿದ್ದರು ಎನ್ನಲಾಗಿದೆ.
ಆಗಿದ್ದೇನು?
ಆಗಸ್ಟ್ 21ರಂದು ಮಧ್ಯಾಹ್ನ 2.25ರ ಸುಮಾರಿಗೆ ಬೆಲ್ಲ ತಯಾರಿಕಾ ಘಟಕದಲ್ಲಿ ಎರಡು ದೊಡ್ಡ ಬಾಣಲೆಗಳಲ್ಲಿ ಬೆಲ್ಲ ಕುದಿಯುತ್ತಿತ್ತು. ಕಾರ್ಮಿಕರೆಲ್ಲ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ದಾನಿಶ್ ಬಾಣಲೆಯ ಅಂಚಿನ ಬಳಿ ಬಂದು ನಿಂತಿದ್ದರು. ಕೆಲವೇ ಕ್ಷಣಗಳಲ್ಲಿ ಅವರಿಗೆ ತಲೆ ಸುತ್ತಿದಂತಾಗಿ ಸಮತೋಲನ ಕಳೆದುಕೊಂಡಿದ್ದಾರೆ.
ನೋಡನೋಡುತ್ತಿದ್ದಂತೆಯೇ ಕುದಿಯುತ್ತಿದ್ದ ಬೆಲ್ಲದ ಪಾಕದ ಬಾಣಲೆಯೊಳಗೆ ನೇರವಾಗಿ ಬಿದ್ದಿದ್ದಾರೆ. ಬಾಣಲೆಯೊಳಗೆ ಸಿಲುಕಿದ ದಾನಿಶ್ ನೋವಿನಿಂದ ಕಿರುಚುತ್ತಾ, “ಕಾಪಾಡಿ... ಕಾಪಾಡಿ... ಅಣ್ಣಾ, ನನ್ನನ್ನು ಕಾಪಾಡಿ” ಎಂದು ಕೂಗಿದ್ದಾರೆ. ಆತನ ಕೂಗು ಕೇಳುತ್ತಿದ್ದಂತೆ ಘಟಕದಲ್ಲಿದ್ದ ಸಹೋದ್ಯೋಗಿಗಳು ಧಾವಿಸಿ ಬಂದಿದ್ದಾರೆ.
ದಾನಿಶ್ ಮೇಲೆತ್ತಲು ಸಹೋದ್ಯೋಗಿಗಳ ಹರಸಾಹಸ
ದಾನಿಶ್ ಕೂಗಾಟ ಕೇಳಿ ದೌಡಾಯಿಸಿದ ಸಹೋದ್ಯೋಗಿಗಳು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಕುದಿಯುತ್ತಿದ್ದ ಪಾಕದಿಂದ ದಾನಿಶ್ ಅವರನ್ನು ಹೊರಗೆಳೆಯುವುದು ಸುಲಭವಾಗಿರಲಿಲ್ಲ. ಮೊದಲು ಓರ್ವ ಕಾರ್ಮಿಕ ದೊಡ್ಡ ಸೌಟಿನ ಸಹಾಯದಿಂದ ದಾನಿಶ್ ಅವರನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಮತ್ತೊಬ್ಬರೂ ಸೌಟು ಹಿಡಿದು ನೆರವಿಗೆ ಬಂದಿದ್ದಾರೆ. ಆದರೆ ಪ್ರಯತ್ನ ವಿಫಲವಾದಾಗ ತಮ್ಮ ಜೀವದ ಅಪಾಯವನ್ನೂ ಲೆಕ್ಕಿಸದೆ ಇಬ್ಬರು-ಮೂವರು ಕಾರ್ಮಿಕರು ಮುಂದೆ ಬಂದು ದಾನಿಶ್ ಅವರನ್ನು ಬಾಣಲೆಯಿಂದ ಹೊರಗೆಳೆದಿದ್ದಾರೆ.
ಹೊರಗೆ ಕರೆತಂದಾಗ ಅವರ ದೇಹದ ಬಹುತೇಕ ಭಾಗದ ಚರ್ಮ ಸುಟ್ಟು ಕಿತ್ತುಹೋಗಿತ್ತು. ತೀವ್ರ ನೋವಿನಿಂದ ದಾನಿಶ್ ನರಳುತ್ತಿದ್ದರು. ಕೆಲ ಕಾರ್ಮಿಕರು ಕೂಡಲೇ ನೀರು ತರಲು ಕೂಗಿ, ಅವರ ಮೇಲೆ ನೀರು ಸುರಿಯಲು ಮುಂದಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
70 ಸಾವಿರ ಸಾಲ ತೀರಿಸಲು ಹೋದವನ ದುರಂತ ಅಂತ್ಯ
ದಾನಿಶ್ ವಿವಾಹವಾಗಿ ಎರಡು ವರ್ಷಗಳಾಗಿತ್ತು. ಅವರಿಗೆ ಎರಡು ತಿಂಗಳ ಪುಟ್ಟ ಮಗುವಿದೆ. ಪತ್ನಿ, ಮಗ, ತಂದೆ-ತಾಯಿ ಹಾಗೂ ಅಣ್ಣ-ತಂಗಿಯನ್ನು ಅವರು ಅಗಲಿದ್ದಾರೆ. ದಾನಿಶ್ ಅವರ ಅಣ್ಣ ಗುಡ್ಡು 70 ಸಾವಿರ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆ ಸಾಲ ತೀರಿಸಲು ಸಹಾಯ ಮಾಡುವ ಉದ್ದೇಶದಿಂದಲೇ ದಾನಿಶ್ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ತೆರಳಿದ್ದರು. ಆದರೆ ಕುಟುಂಬಕ್ಕೆ ನೆರವಾಗಲು ಹೋದ ಯುವಕನ ಬದುಕೇ ದುರಂತದಲ್ಲಿ ಅಂತ್ಯಗೊಂಡಿದೆ.
ಅಪಘಾತದ ಮಾಹಿತಿ ಪಡೆದ ಮಹಾರಾಷ್ಟ್ರ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೂಡಿ ಗ್ರಾಮಕ್ಕೆ ಕಳುಹಿಸಿದ್ದರು. ಶನಿವಾರ ಮೃತದೇಹ ಗ್ರಾಮಕ್ಕೆ ತಲುಪುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿತು. ದಾನಿಶ್ ಜೊತೆ ಮಹಾರಾಷ್ಟ್ರಕ್ಕೆ ತೆರಳಿದ್ದ ಕಾರ್ಮಿಕರ ವಿರುದ್ಧ ಕುಟುಂಬಸ್ಥರು ಆರೋಪಗಳನ್ನು ಮಾಡುತ್ತಾ ಗದ್ದಲ ಆರಂಭಿಸಿದರು. ಮಾಹಿತಿ ಪಡೆದ ಈಸಾನಗರ ಪೊಲೀಸರು ಗ್ರಾಮಕ್ಕೆ ತೆರಳಿದರು. ಕುಟುಂಬಸ್ಥರಿಗೆ ಬೆಲ್ಲ ತಯಾರಿಕಾ ಘಟಕದಲ್ಲಿನ ಸಿಸಿಟಿವಿ ದೃಶ್ಯಗಳನ್ನು ತೋರಿಸಿದರು.
ದೃಶ್ಯ ವೀಕ್ಷಿಸಿದ ಬಳಿಕ ಕುಟುಂಬಸ್ಥರು ಶಾಂತವಾದರು. ಈಸಾನಗರದ ಸಿಒ ಶಂಶೇರ್ ಬಹದ್ದೂರ್ ಸಿಂಗ್ ಮಾತನಾಡಿ, “ಮಹಾರಾಷ್ಟ್ರದ ಬೆಲ್ಲ ತಯಾರಿಕಾ ಘಟಕದಲ್ಲಿ ಈ ಘಟನೆ ನಡೆದಿದೆ. ಮೃತದೇಹ ಗ್ರಾಮಕ್ಕೆ ಬಂದಾಗ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ತಂಡವನ್ನು ಕಳುಹಿಸಲಾಗಿತ್ತು. ಈವರೆಗೆ ಯಾರ ವಿರುದ್ಧವೂ ಲಿಖಿತ ದೂರು ಬಂದಿಲ್ಲ” ಎಂದು ತಿಳಿಸಿದ್ದಾರೆ.