ಮುಂಬೈ: ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರು ಮರಾಠಿ ಕಲಿಯಲು ಒಂದು ವರ್ಷದ ಕಾಲಾವಕಾಶ ನೀಡಲಾಗಿದೆ.
ಆಟೋ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ವ್ಯವಹಾರಕ್ಕೆ ಅಗತ್ಯವಿರುವ ಮಟ್ಟದ ಮರಾಠಿ ಭಾಷೆಯನ್ನು ಕಲಿಯಲು ಒಂದು ವರ್ಷದ ಕಾಲಾವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ಘೋಷಿಸಿದ್ದಾರೆ.
ರಾಜ್ಯದ ಅಧಿಕೃತ ಭಾಷೆಯ ಬಗ್ಗೆ ಅಗತ್ಯ ಜ್ಞಾನವಿಲ್ಲದ ಕಾರಣಕ್ಕಾಗಿ ಈ ಅವಧಿಯಲ್ಲಿ ಚಾಲಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಶಿವಸೇನೆಯ ಸಚಿವ ಪ್ರತಾಪ್ ಸರ್ನಾಯಕ್ ನೇತೃತ್ವದ ಸಾರಿಗೆ ಇಲಾಖೆಯು ಇತ್ತೀಚೆಗೆ ತಪಾಸಣಾ ಅಭಿಯಾನ ನಡೆಸಿ, ಮರಾಠಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಚಾಲಕರಿಗೆ ನೋಟಿಸ್‌ಗಳನ್ನು ನೀಡಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.
ಹಾಜಿ ಅರ್ಫತ್ ಶೇಖ್ ನೇತೃತ್ವದಲ್ಲಿ ಆಟೋ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಪ್ರತಿನಿಧಿಗಳು ತಮ್ಮನ್ನು ಭೇಟಿಯಾಗಿದ್ದರು. ಚಾಲಕರು ಪ್ರಾದೇಶಿಕ ಭಾಷೆಯಾದ ಮರಾಠಿ ಭಾಷೆಯನ್ನು ಕಲಿಯಬೇಕು ಎಂಬ ನಿಯಮವನ್ನು ಅವರು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಮತ್ತು ಅದನ್ನು ಕಲಿಯಲು ಸಿದ್ಧರಿದ್ದಾರೆ ಎಂದೂ ಅವರು ಹೇಳಿದರು.