ಮುಂಬೈ (ಮಹಾರಾಷ್ಟ್ರ): ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಲೋಕಸೇವಾ ಆಯೋಗ (MPSC) ನಡೆಸಿದ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಡ್ರಗ್ ಇನ್ಸ್‌ಪೆಕ್ಟರ್ (ಗ್ರೂಪ್-ಬಿ) ಹುದ್ದೆಗಳ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಪೇಪರ್ ಲೀಕ್ ಆಗಿರುವುದು ದೃಢಪಟ್ಟ ನಂತರ ಆಯೋಗವು ಈ ಕಠಿಣ ನಿರ್ಧಾರ ಕೈಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
ಮಹಾರಾಷ್ಟ್ರ ಲೋಕಸೇವಾ ಆಯೋಗವು, ಡ್ರಗ್ ಇನ್ಸ್‌ಪೆಕ್ಟರ್ ಹುದ್ದೆಗಳಿಗಾಗಿ 2026ರ ಮಾರ್ಚ್ 22ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿದ್ದವು. ಅದರಲ್ಲೂ, ಈ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಸಂದರ್ಶನ ಹಂತವನ್ನು ತಲುಪಿ, ಒಟ್ಟು 506 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು, ಆದರೆ 488 ಅಭ್ಯರ್ಥಿಗಳು ಜುಲೈ 1 ರಿಂದ ಜುಲೈ 22, 2026 ರವರೆಗೆ ನಡೆದ ಸಂದರ್ಶನಗಳಿಗೆ ಹಾಜರಾಗಿದ್ದರು. ನೇಮಕಾತಿಯನ್ನು ರದ್ದುಗೊಳಿಸುವ ಮೊದಲು ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಯಿತು. ಆದರೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಇಡೀ ಪ್ರಕ್ರಿಯೆಯನ್ನು ಶೂನ್ಯಗೊಳಿಸಲಾಗಿದೆ.
ಇನ್ನು, ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರು 3 MPSC ಅಧಿಕಾರಿಗಳು ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ, ಪ್ರತಿಪಕ್ಷಗಳ ನಾಯಕರು ಈ ಪೇಪರ್ ಲೀಕ್ ಹಿಂದೆ ದೊಡ್ಡ ದಂಧೆ ನಡೆದಿದ್ದು, ತಲಾ 40 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, MPSC ಅಧ್ಯಕ್ಷರ ರಾಜೀನಾಮೆಗೂ ಒತ್ತಾಯಿಸಿದ್ದಾರೆ.
ಮುಂದುವರೆದು, ಅರ್ಹ ಅಭ್ಯರ್ಥಿಗಳಿಗೆ ಶೀಘ್ರದಲ್ಲೇ ಹೊಸದಾಗಿ ಮರುಪರೀಕ್ಷೆ ನಡೆಸಲಾಗುವುದು ಎಂದು ಆಯೋಗ ಪ್ರಕಟಿಸಿದೆ. ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವ ಅಥವಾ ಹೆಚ್ಚುವರಿ ಪರೀಕ್ಷಾ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ