ನವದೆಹಲಿ: ತಿರುಪತಿ ಲಡ್ಡು ಪ್ರಸಾದದ ಕಲಬೆರಕೆ ಕುರಿತು ಮಾನಹಾನಿಕರ ಪ್ರಕಟಣೆಯ ಆರೋಪದ ವಿರುದ್ಧ ತಿರುಮಲ ತಿರುಪತಿ ದೇವಸ್ತಾನಮ್ಸ್ (TTD) ಮಾಜಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಅವರಿಗೆ ಮಧ್ಯಂತರ ಪರಿಹಾರ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಜೂನ್ 2019 ರಿಂದ ಆಗಸ್ಟ್ 2023 ರವರೆಗೆ ಟಿಟಿಡಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ರೆಡ್ಡಿ ಅವರು, ಪ್ರತಿವಾದಿಗಳ (ಸಂಸ್ಥೆಗಳು, ಪ್ರಕಾಶಕರು ಮತ್ತು ಮಾನಹಾನಿಕರ ಲೇಖನಗಳ ಲೇಖಕರ) ಆರೋಪದ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಹಿಂದೂ ಧರ್ಮದ ನಂಬಿಕೆಯ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತುಪ್ಪ ಖರೀದಿಯಲ್ಲಿ ಕಲಬೆರಕೆ ಮಾಡಿದ್ದಾರೆ ಎಂದು ಆರೋಪಿಗಳು ಮಾನಹಾನಿಕರ ಪ್ರಕಟಣೆ ನೀಡಿದ್ದಾರೆ ಎಂದು ರೆಡ್ಡಿ ಮನವಿಯಲ್ಲಿ ಹೇಳಿದ್ದರು.
ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಮಧ್ಯಂತರ ತಡೆಯಾಜ್ಞೆಗಳನ್ನು ನೀಡಬಹುದು ಎಂದು ನ್ಯಾಯಮೂರ್ತಿಅಮಿತ್ ಬನ್ಸಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರತಿವಾದಿಗಳ ಆಕ್ಷೇಪಾರ್ಹ ಹೇಳಿಕೆ, ಪೋಸ್ಟ್‌ಗಳು, ಲೇಖನಗಳ ವಿರುದ್ಧ ಮಧ್ಯಂತರ ತಡೆಯಾಜ್ಞೆ ನೀಡಲು ಕೋರ್ಟ್ ಒಲವು ಹೊಂದಿಲ್ಲ. ಪ್ರತಿವಾದಿಗಳು ತಮ್ಮ ಪ್ರಕಟಣೆಗಳು, ಪೋಸ್ಟ್‌ಗಳು ಮತ್ತು ಲೇಖನಗಳಿಗೆ ಸಂಬಂಧಿಸಿದಂತೆ ಪ್ರತಿವಾದವನ್ನು ಮಂಡಿಸಲು ಅವಕಾಶ ನೀಡುವುದು ಸಮಂಜಸವಾಗಿದೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.