ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕಫದ ಸಮಸ್ಯೆಯಿಂದ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಅವರ ಆರೋಗ್ಯ ಸ್ಥಿರವಾಗಿದ್ದು, ಹೃದ್ರೋಗ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಅವರಿಗೆ ಕೆಲ ದಿನಗಳಿಂದ ಕೆಮ್ಮು ಮತ್ತು ಕಫದ ಸಮಸ್ಯೆಯಿದೆ. ದೆಹಲಿಯಲ್ಲಿ ಈಗ ತೀವ್ರ ವಾಯುಮಾಲಿನ್ಯವಿರುವುದರಿಂದ ಅವರು ತಪಾಸಣೆಗಾಗಿ ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿ ಅವರಿಗೆ 79 ವರ್ಷ ವಯಸ್ಸಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಅವರನ್ನು ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪ್ರಸ್ತುತ, ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಸ್ಥಿರವಾಗಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಆಂಟಿಬಯೋಟಿಕ್ ಮತ್ತು ಇತರ ಪೂರಕ ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸುಧಾರಣೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗಂಗಾರಾಮ್ ಆಸ್ಪತ್ರೆಯ ಡಾ. ಅಜಯ್ ಸ್ವರೂಪ್ ತಿಳಿಸಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಹಾರೈಕೆ
ಸೋನಿಯಾ ಗಾಂಧಿ ಅವರು ಶೀಘ್ರವಾಗಿ ಗುಣಮುಖ ಹೊಂದಲು ಡಿಸಿಎಂ ಡಿ ಕೆ ಶಿವಕುಮಾರ್ ಹಾರೈಸಿದ್ದಾರೆ. ಅವರು ಇನ್ನಷ್ಟು ವರ್ಷ ಕಾಂಗ್ರೆಸ್ ಪಕ್ಷ ಮತ್ತು ದೇಶಕ್ಕಾಗಿ ದುಡಿಯುವ ಅಗತ್ಯವಿದ್ದು, ಅವರ ದೀರ್ಘ ಆರೋಗ್ಯಕ್ಕೆ ಆಶಿಸುತ್ತೇನೆ ಎಂದು ಹೇಳಿದ್ದಾರೆ.