ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರನ್ನು "ರಸಮಲೈ" ಎಂದು ಕರೆಯುವ ಮೂಲಕ ವಿವಾದವೊಂದನ್ನು ಹುಟ್ಟುಹಾಕಿದ್ದು, ಮುಂಬೈ ಬಗ್ಗೆ ಮಾತನಾಡಲು ಅವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಕೆಲ "ರಸಮಲೈ" ತಮಿಳುನಾಡಿನಿಂದ ಮುಂಬೈಗೆ ಬಂದು ಬಾಂಬೆ ಮಹಾರಾಷ್ಟ್ರ ನಗರವಲ್ಲ. ಮುಂಬೈ ಮತ್ತು ಮಹಾರಾಷ್ಟ್ರದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದನ್ನು ಹೇಳಲು ಅವರು ಯಾರು? ಮುಂಬೈ ಜೊತೆ ನಿಮಗೆ ಏನು ಸಂಬಂಧವಿದೆ, ನೀವು ಇಲ್ಲಿಗೆ ಏಕೆ ಬಂದಿದ್ದೀರಿ? ಅದಕ್ಕಾಗಿಯೇ ಬಾಳಾಸಾಹೇಬ್ 'ಲುಂಗಿ ಹಟಾವೋ, ಪುಂಗಿ ಬಜಾವೋ ಎಂದು ಅಪಹಾಸ್ಯ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ಗುಡುಗಿರುವ ಅವರು, ಬಿಜೆಪಿ ಹೈಕಮಾಂಡ್ ದೊಡ್ಡ ಸಂಚು ಇದಾಗಿದ್ದು, ಮುಂಬೈಯನ್ನು ಮಹಾರಾಷ್ಟ್ರದಿಂದ ಬೇರ್ಪಡಿಸುವ ಉದ್ದೇಶದಿಂದ ಮರಾಠಿ ಜನರು ಮತ್ತು ಮಹಾರಾಷ್ಟ್ರವನ್ನು ಗುರಿಯಾಗಿಸಿಕೊಂಡು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ನಾವು ಇದರ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ. ಮುಂಬೈಗಾಗಿ 106 ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ಅವರ ಪಿತೂರಿಯನ್ನು ಜನರು ಗಮನಿಸಬೇಕು. ಆದ್ದರಿಂದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಅಣ್ಣಾಮಲೈ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಮರ್ಥಿಸಿಕೊಂಡಿದ್ದಾರೆ.
ಅಣ್ಣಾಮಲೈ ಅವರ ಹೇಳಿಕೆಯನ್ನು ತಿರುಚಲಾಗಿದೆ. ಅಣ್ಣಾಮಲೈ ಮಹಾರಾಷ್ಟ್ರದವರಲ್ಲ ಅಥವಾ ರಾಷ್ಟ್ರೀಯ ಬಿಜೆಪಿ ನಾಯಕರಲ್ಲ ಆದರೂ ಅವರ ಹೇಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅಣ್ಣಾಮಲೈ ಅವರು ಮುಂಬೈ ಮಹಾರಾಷ್ಟ್ರ ನಗರವಲ್ಲ ಎಂದು ಹೇಳಿದ್ದಲ್ಲ. ಮುಂಬೈ ಅಂತರಾಷ್ಟ್ರೀಯ ನಗರ ಎಂದು ಹೇಳಿದ್ದಾರೆ. ಅವರಿಗೆ ಹಿಂದಿ ಚೆನ್ನಾಗಿ ಬರುವುದಿಲ್ಲ. ಹೀಗಾಗಿ ಮುಂಬೈ ಬದಲಿಗೆ ಬಾಂಬೆ ಎಂದು ಹಲವು ಬಾರಿ ಬಳಸಿದ್ದಾರೆ. ನಾವೂ ಕೂಡ ಚೆನ್ನೈಯನ್ನು ಮದ್ರಾಸ್ ಎಂದು ಕರೆಯುತ್ತೇವೆ. ಯಾರಾದರೂ ಹೇಳಿದರೆ ತಕ್ಷಣ ಸರಿಪಡಿಸಿಕೊಳ್ಳುತ್ತೇವೆ. ಆದ್ದರಿಂದ, ಅಣ್ಣಾಮಲೈ ಅವರ ಹೇಳಿಕೆಗೆ ಹೆಚ್ಚಿನ ಗಮನ ನೀಡಬಾರದು ಎಂದು ತಿಳಿಸಿದರು.