ಸೂರತ್: ದೇಶದಲ್ಲಿ ಮಾಂಜಾ ದಾರಕ್ಕೆ ಮತ್ತೆ ಮೂರು ಸಾವು ಸಂಭವಿಸಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ಕುಟುಂಬಕ್ಕೆ ಗಾಳಿಪಟ ದಾರ ಸಿಲುಕಿ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಸೂರತ್ ನಲ್ಲಿ ವರದಿಯಾಗಿದೆ.
ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಬುಧವಾರ ಗಾಳಿಪಟದ ದಾರವೊಂದು ದ್ವಿಚಕ್ರ ವಾಹನ ಸವಾರರ ಕುತ್ತಿಗೆಗೆ ಸಿಲುಕಿದ್ದು, ಪರಿಣಾಮ ಬೈಕ್ ಸಮತೋಲನ ತಪ್ಪಿ 70 ಅಡಿ ಎತ್ತರದ ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದಿದೆ.
ಈ ವೇಳೆ ಬೈಕ್ ನಲ್ಲಿದ್ದ ಮೂರು ಜನರ ಕುಟುಂಬ ಸಾವನ್ನಪ್ಪಿದೆ. ಮೃತ ಮೂವರ ಪೈಕಿ ದಂಪತಿ ಮತ್ತು 7 ವರ್ಷದ ಮಗು ಸೇರಿದೆ ಎಂದು ತಿಳಿದುಬಂದಿದೆ.
ಆಗಿದ್ದೇನು?
ಮೂಲಗಳ ಪ್ರಕಾರ ರೆಹಾನ್ ಮತ್ತು ಆಯಿಷಾ ದಂಪತಿ ತಮ್ಮ 7 ವರ್ಷದ ಮಗಳೊಂದಿಗೆ ಬೈಕ್ ನಲ್ಲಿ ಸೂರತ್ ನ ಚಂದ್ರಶೇಖರ್ ಆಜಾದ್ ಫ್ಲೈಓವರ್ ಮೇಲೆ ತೆರಳುತ್ತಿದ್ದರು. ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ರೆಹಾನ್ ತನ್ನ ಕುಟುಂಬವನ್ನು ಹೊರಗೆ ಕರೆದೊಯ್ದಿದ್ದರು.
ಈ ವೇಳೆ ಮೇಲ್ಸೇತುವೆ ಮೇಲೆ ತೆರಳುತ್ತಿದ್ದಾಗ ರೆಹಾನ್ ಬೈಕ್ ಗೆ ಗಾಳಿಪಟ ದಾರ ಸಿಲುಕಿದೆ. ರೆಹಾನ್ ಬೈಕ್ ಚಲಿಸುತ್ತಿರುವಾಗಲೇ ಒಂದು ಕೈಯಲ್ಲಿ ಅದನ್ನು ತೆಗೆಯಲು ಯತ್ನಿಸಿದ್ದಾರೆ.
ಆಗ ಬೈಕ್ ನಿಯಂತ್ರಣ ತಪ್ಪಿ 70 ಅಡಿ ಎತ್ತರದ ಮೇಲ್ಸೇತುವೆ ತಡೆಗೋಡೆಗೆ ಢಿಕ್ಕಿಯಾಗಿ ಮೇಲಿಂದ ಕೆಳಗೆ ಬಿದ್ದಿದೆ. ಈ ವೇಳೆ ಮೇಲ್ಸೇತುವೆ ಕೆಳಗೆ ನಿಂತಿದ್ದ ಆಟೋ ಮೇಲೆ ಬೈಕ್ ಬಿದ್ದಿದ್ದು, ಅದರಲ್ಲಿದ್ದ ರೆಹಾನ್ ಮತ್ತು ಆಯೇಷಾ ಮತ್ತು ಅವರ ಮಗಳಿಗೆ ಗಂಭೀರವಾಗಿ ಗಾಯಗಳಾಗಿವೆ.
ಕೂಡಲೇ ಸ್ಥಳೀಯರು ಅವರನ್ನು ಕೆಳಕ್ಕೆ ಇಳಿಸಿದರಾದರೂ ಮಗು ಮತ್ತು ಆಯೇಷಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ರೆಹಾನ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ರೆಹಾನ್ ಕೂಡ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆ ಮೂಲಕ ರಜೆ ಮೋಜಿಗೆ ಹೊರಗೆ ತೆರಳುತ್ತಿದ್ದ ಒಂದಿಡೀ ಕುಟುಂಬ ಗಾಳಿಪಟದ ದಾರಕ್ಕೆ ಬಲಿಯಾದಂತಾಗಿದೆ.