ಲಾತೂರ್: ಬಹು ನಿರೀಕ್ಷಿತ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಲಾತೂರ್ ಮಹಾನಗರ ಪಾಲಿಕೆ ಕಾಂಗ್ರೆಸ್ ವಶವಾಗಿದೆ.
ಲಾತೂರ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳಲ್ಲಿ ಕಾಂಗ್ರೆಸ್ 43 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ರಾವ್ ದೇಶಮುಖ್ ಅವರ ನೆನಪುಗಳನ್ನು ಅವರ ಹುಟ್ಟೂರು ಲಾತೂರ್‌ನಿಂದ ಅಳಿಸಿಹಾಕುತ್ತೇವೆ ಎಂದಿದ್ದ ಬಿಜೆಪಿ ತೀವ್ರ ಮುಖಭಂಗವಾಗಿದೆ.
ಮಹಾರಾಷ್ಟ್ರ ಆಡಳಿತರೂಢ ಬಿಜೆಪಿ 22 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣೆಗೆ ಮುನ್ನ, ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶಮುಖ್ ಅವರ ನೆನಪುಗಳನ್ನು ಅವರ ಹುಟ್ಟೂರು ಲಾತೂರ್‌ನಿಂದ ಅಳಿಸಿ ಹಾಕುತ್ತವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು.
ಚವಾಣ್ ಹೇಳಿಕೆಗಳನ್ನು ಖಂಡಿಸಿದ್ದ ಅಮಿತ್ ದೇಶಮುಖ್ ಅವರು, ‘ಹೊರಗಿನವರು’ ಬಂದು ಹೇಳಿಕೆ ನೀಡಿದ್ದಾರೆ ಎಂಬ ಮಾತ್ರಕ್ಕೆ ತನ್ನ ತಂದೆಯ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ತನ್ನ ತಂದೆಯ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟ ರಿತೇಶ್ ದೇಶಮುಖ್ ಕೂಡ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.