ಮದ್ರಾಸ್: ಸನಾತನ ಧರ್ಮದ ಕುರಿತು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು 2023ರಲ್ಲಿ ನೀಡಿದ್ದ ಹೇಳಿಕೆಗಳು ದ್ವೇಷ ಭಾಷಣಕ್ಕೆ ಸಮವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
100 ವರ್ಷಗಳಲ್ಲಿ ಡಿಎಂಕೆಯಿಂದ "ಹಿಂದೂ ಧರ್ಮದ ಮೇಲೆ ಸ್ಪಷ್ಟ ದಾಳಿ" ನಡೆದಿದೆ ಎಂದು ಹೈಕೋರ್ಟ್‌ನ ಮಧುರೈ ಪೀಠವು ಅಭಿಪ್ರಾಯ ಪಟ್ಟಿದೆ, ಸಚಿವರು ಅದೇ ಸೈದ್ಧಾಂತಿಕ ವಂಶಕ್ಕೆ ಸೇರಿದವರು ಎಂದು ನ್ಯಾಯಾಲಯ ಹೇಳಿದೆ.
ತಮಿಳುನಾಡಿನಲ್ಲಿ ಸಚಿವರ ವಿರುದ್ಧ ದ್ವೇಷ ಭಾಷಣಕ್ಕಾಗಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ಇತರ ರಾಜ್ಯಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ಹೈಕೋರ್ಟ್ ಹೇಳಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ನಾಶ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ, ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ, ನಾವು ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಹೇಳಿಕೆ ನೀಡಿದ್ದರು. ಹೇಳಿಕೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ದ್ವೇಷ ಭಾಷಣವನ್ನು ಆರಂಭಿಸುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವ ಸಂದರ್ಭಗಳಲ್ಲಿ, ಅದಕ್ಕೆ ಪ್ರತಿಕ್ರಿಯಿಸುವವರ ವಿರುದ್ಧ ಮಾತ್ರ ಕಾನೂನು ಕ್ರಮ ಜರುಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ದ್ವೇಷ ಭಾಷಣ ಆರಂಭಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಕಾನೂನು ಜಾರಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ ಎಂದೂ ಪೀಠ ಹೇಳಿದೆ.
ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳನ್ನು ವಿರೂಪಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಬಿಜೆಪಿ ನಾಯಕ ಅಮಿತ್ ಮಾಳವೀಯ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ರದ್ದುಗೊಳಿಸಿದೆ. ಪ್ರಕರಣವನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಪೀಠ ಹೇಳಿದ್ದು, ತಿರುಚಿ ಪೊಲೀಸರಿಗೆ ಎಫ್‌ಐಆರ್ ರದ್ದುಪಡಿಸುವಂತೆ ನಿರ್ದೇಶನ ನೀಡಿದೆ.