ಗುವಾಹಟಿ: ಮಣಿಪುರದಲ್ಲಿ ಸ್ವಲ್ಪ ದಿನಗಳಿಂದ ತಣ್ಣಗಾಗಿದ್ದ ಶಾಂತಿಗೆ ಮತ್ತೆ ಭಂಗ ತರಲಾಗಿದೆ. ಚುರಾಚಂದ್‌ಪುರ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರು ಮೆಯ್ಟೀ ವ್ಯಕ್ತಿಯ ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದ್ದ ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಇಂತಹ ಘಟನೆ ವರದಿಯಾಗಿರಲಿಲ್ಲ. ಕಳೆದ ವರ್ಷ ಫೆಬ್ರವರಿ 13 ರಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ಸರ್ಕಾರ ರಚನೆಯ ಸಾಧ್ಯತೆಯ ಬಗ್ಗೆ ಊಹಾಪೋಹಗಳು ಹೆಚ್ಚಾಗುತ್ತಿರುವಂತೆಯೇ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಮೃತ ವ್ಯಕ್ತಿಯನ್ನು ಮಾಯಂಗ್ಲಂಬಮ್ ರಿಷಿಕಾಂತ ಸಿಂಗ್ ಎಂದು ಗುರುತಿಸಲಾಗಿದೆ. ಆತನ ಕುಕಿ ಪತ್ನಿ ಚಿಂಗ್ನು ಹಾಕಿಪ್ ಅವರೊಂದಿಗೆ ಬುಧವಾರ ಚುರಾಚಂದ್‌ಪುರ ಜಿಲ್ಲೆಯ ತುಬಾಂಗ್ ಪ್ರದೇಶದಲ್ಲಿನ ಅವರ ಮನೆಯಿಂದ ಅಪಹರಿಸಲಾಗಿದೆ. ನಂತರ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಮಹಿಳೆಯನ್ನು ಬಿಟ್ಟು ಕಳುಹಿಸಲಾಗಿದೆ. ಈ ವ್ಯಕ್ತಿ ಮೂಲತಃ ಇಂಫಾಲ್ ಕಣಿವೆಯ ಕಕ್ಚಿಂಗ್ ಖುನೌ ಮೂಲದವರಾಗಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಡಿಯೋ ಇಲ್ಲದ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ನೆಲದ ಮೇಲೆ ಕುಳಿತುಕೊಂಡು ವಿಡಿಯೋದಲ್ಲಿ ಕಾಣದ ವ್ಯಕ್ತಿಗಳ ಮುಂದೆ ಕೈಮುಗಿದು ಏನನ್ನೋ ಬೇಡಿಕೊಳ್ಳುತ್ತಿರುವುದನ್ನು ತೋರಿಸುತ್ತದೆ. ಸ್ವಲ್ಪ ಸಮಯದ ನಂತರ ಬೆಂಕಿಯ ಸ್ಫೋಟ ಉಂಟಾಗಿದ್ದು, ದೇಹವು ನೆಲದ ಮೇಲೆ ಬಿದ್ದಿರುತ್ತದೆ.
ಪೊಲೀಸರು ಮಧ್ಯರಾತ್ರಿ ನಟ್‌ಜಾಂಗ್ ಗ್ರಾಮದಿಂದ ಮೃತದೇಹವನ್ನು ಹೊರತೆಗೆದು ಚುರಾಚಂದಪುರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಕಾರ್ಯಾಚರಣೆಗಳ ಅಮಾನತು (SoO) ಒಪ್ಪಂದಕ್ಕೆ ಸಹಿ ಹಾಕದ ಯುನೈಟೆಡ್ ಕುಕಿ ರಾಷ್ಟ್ರೀಯ ಸೇನೆಯು ಘಟನೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸುಮಾರು ಎರಡು ಡಜನ್ ಕುಕಿ ಉಗ್ರರು ಈ ಹಿಂದೆ ಮಣಿಪುರ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ತ್ರಿಪಕ್ಷೀಯ SoO ಒಪ್ಪಂದಕ್ಕೆ ಸಹಿ ಹಾಕಿದ್ದವು.
ಮೃತನು ತನ್ನ ಮದುವೆಯ ನಂತರ ಗಿನ್ಮಿಂಥಾಂಗ್ ಎಂಬ ಬುಡಕಟ್ಟು ಹೆಸರು ಇಟ್ಟುಕೊಂಡಿದ್ದ. ಆತ ನೇಪಾಳದಲ್ಲಿ ಉದ್ಯೋಗದಲ್ಲಿದ್ದರು. ಮೂರು ದಿನಗಳ ಹಿಂದೆಯಷ್ಟೇ ಮನೆಗೆ ಮರಳಿದ್ದರು ಎಂದು ವರದಿಗಳು ಹೇಳುತ್ತವೆ.
ಜನಾಂಗೀಯ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಕೆಲವು ಕುಕಿ ಉಗ್ರರು ಹತ್ಯೆಯಾದ ವ್ಯಕ್ತಿ ಅವರ ಪತ್ನಿಯೊಂದಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ರಕ್ತಸಿಕ್ತ ಜನಾಂಗೀಯ ಹಿಂಸಾಚಾರದಲ್ಲಿ 260 ಕ್ಕೂ ಹೆಚ್ಚು ಜನರ ಹತ್ಯೆಯಾಗಿದ್ದು, ಅಂದಾಜು 60,000 ಜನರು ಸ್ಥಳಾಂತರಗೊಂಡಿದ್ದರು. ನಿರಾಶ್ರಿತರಾದ ಬಹುಪಾಲು ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿದ್ದಾರೆ.