ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು, ಈ ಪ್ರಕ್ರಿಯೆಯನ್ನು "ಅನಗತ್ಯ ಆತುರ"ದಿಂದ ನಡೆಸಲಾಗುತ್ತಿದೆ ಮತ್ತು ಇದು ಪ್ರಜಾಪ್ರಭುತ್ವದ ಭಾಗವಹಿಸುವಿಕೆಗೆ ಅಪಾಯವನ್ನುಂಟುಮಾಡಬಹುದು ಎಂದು ಶನಿವಾರ ಎಚ್ಚರಿಸಿದ್ದಾರೆ.
92 ವರ್ಷದ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಬೋಸ್ಟನ್‌ನಿಂದ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಜಾಸತ್ತಾತ್ಮಕ ಮೌಲ್ಯ ಮತ್ತು ಅವು ಮತದಾನದ ಹಕ್ಕುಗಳನ್ನು ಬಲಪಡಿಸಬೇಕು. ಆದರೆ ಬಂಗಾಳದ ಪ್ರಕರಣದಲ್ಲಿ ಅದು "ಕಾಣೆಯಾಗಿದೆ" ಎಂದಿದ್ದಾರೆ.
ಎಸ್ಐಆರ್ ನಂತಹ ಪ್ರಕ್ರಿಯೆಯನ್ನು ಎಚ್ಚರಿಕೆಯಿಂದ ಮತ್ತು ಸಾಕಷ್ಟು ಸಮಯದೊಂದಿಗೆ ನಡೆಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ SIR ಅನ್ನು ಆತುರದಿಂದ ಮಾಡಲಾಗುತ್ತಿದೆ. ಮತದಾನದ ಹಕ್ಕು ಹೊಂದಿರುವ ಜನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸುವ ಹಕ್ಕನ್ನು ಪಡೆಯಲು ದಾಖಲೆಗಳನ್ನು ಸಲ್ಲಿಸಲು ಸಾಕಷ್ಟು ಅವಕಾಶ ಮತ್ತು ಸಾಕಷ್ಟು ಸಮಯ ನೀಡಿಲ್ಲ. ಇದು ಮತದಾರರಿಗೆ ಮತ್ತು ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅನ್ಯಾಯವಾಗಿದೆ" ಎಂದು ಕಿಡಿ ಕಾರಿದ್ದಾರೆ.
ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಮಯದಲ್ಲಿ ತಮ್ಮದೇ ಆದ ಅನುಭವವನ್ನು ಹಂಚಿಕೊಂಡ ಸೇನ್, ಚುನಾವಣಾ ಅಧಿಕಾರಿಗಳಲ್ಲಿಯೂ ಸಹ ಸಮಯದ ಒತ್ತಡ ಸ್ಪಷ್ಟವಾಗಿತ್ತು ಎಂದಿದ್ದಾರೆ.