ನವದೆಹಲಿ: ಟಿಶ್ಯೂ ಪೇಪರ್‌ನಲ್ಲಿ ಬಾಂಬ್ ಬೆದರಿಕೆ ಹಾಗೂ ಹೈಜಾಕ್ ಸಂದೇಶವನ್ನು ಸಿಬ್ಬಂದಿ ಪತ್ತೆ ಮಾಡಿದ ನಂತರ ಕುವೈತ್ ನಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ಅಹಮದಾಬಾದ್ ಕಡೆಗೆ ಮಾರ್ಗ ಬದಲಾಯಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ವಿಮಾನದ ಸಿಬ್ಬಂದಿ ಸೇರಿದಂತೆ 180 ಜನರಿದ್ದ ವಿಮಾನ ಇಂದು ಬೆಳಿಗ್ಗೆ 6.40 ರ ಸುಮಾರಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ಟಿಶ್ಯೂ ಪೇಪರ್ ನಲ್ಲಿ ಬರೆಯಲಾದ ಸಂದೇಶದಲ್ಲಿ ವಿಮಾನದೊಳಗೆ ಬಾಂಬ್ ಇಡಲಾಗಿದೆ ಎಂದು ಹೇಳಲಾಗಿತ್ತು. ಬಳಿಕ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಅಹಮದಾಬಾದ್‌ಗೆ ತಿರುಗಿಸಲಾಯಿತು.
ಲ್ಯಾಂಡಿಂಗ್ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರ ಲಗೇಜ್ ಅನ್ನು ಪರಿಶೀಲಿಸಲಾಗಿದೆ. ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ವಿಮಾನದಲ್ಲಿ ಸಂಪೂರ್ಣ ಶೋಧ ನಡೆಸಿವೆ.
ಇಲ್ಲಿಯವರೆಗೆ ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತಿಮ ಅನುಮತಿ ಪಡೆದ ನಂತರ ವಿಮಾನವು ಅಹಮದಾಬಾದ್‌ನಿಂದ ದೆಹಲಿಗೆ ಹೊರಡುವ ನಿರೀಕ್ಷೆಯಿದೆ.
ಎರಡು ವಾರಗಳ ಹಿಂದೆ, ದೆಹಲಿಯಿಂದ ಪಶ್ಚಿಮ ಬಂಗಾಳದ ಬಾಗ್ಡೋಗ್ರಾಕ್ಕೆ ಇಂಡಿಗೋ ವಿಮಾನವನ್ನು ಇದೇ ರೀತಿ ಬೆದರಿಕೆ ಸಂದೇಶ ಬಂದ ನಂತರ ಲಖನೌ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿತ್ತು.
ಡಿಸೆಂಬರ್ 4 ರಂದು ಮದೀನಾದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಬೆದರಿಕೆ ಕರೆಯಿಂದ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಹೀಗೆ ಇತ್ತೀಚಿನ ದಿನಗಳಲ್ಲಿ ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಲಾಗುತ್ತಿದೆ.