ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈಗೆ ಆಗಮಿಸಿದ ಅಮೆರಿಕದ ಪ್ರವಾಸಿಗರೊಬ್ಬರು ಕೇವಲ 400 ಮೀಟರ್ ದೂರದ ಪ್ರಯಾಣಕ್ಕಾಗಿ ಟ್ಯಾಕ್ಸಿ ಚಾಲಕನಿಗೆ 18,000 ರೂ.ಗಳಷ್ಟು ದುಬಾರಿ ಬಾಡಿಗೆ ಪಾವತಿಸಿದ್ದು, ಹಗಲು ದರೋಡೆಗಿಳಿದ 50 ವರ್ಷದ ಟ್ಯಾಕ್ಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕ ಪ್ರವಾಸಿಗನನ್ನು ಕರೆದುಕೊಂಡು ಹೋಗಿ ಅವರು ತಂಗಬೇಕಿದ್ದ ಪಂಚತಾರಾ ಹೋಟೆಲ್‌ನಲ್ಲಿ ಇಳಿಸಿದ ದೇಶರಾಜ್ ಯಾದವ್‌ನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ಯಾಬ್ ಚಾಲಕ, ವಿದೇಶಿ ಪ್ರವಾಸಿಗನನ್ನು ಮುಂಬೈ ವಿಮಾನ ನಿಲ್ದಾಣದಿಂದ ಹಿಲ್ಟನ್ ಹೋಟೆಲ್ ಗೆ ಕರೆದುಕೊಂಡಿದ್ದಾರೆ. ವಾಸ್ತವವಾಗಿ, ಆ ಹೋಟೆಲ್ ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿತ್ತು. ಅಲ್ಲಿಗೆ ನಡೆದುಕೊಂಡು ಹೋದರೂ 10 ನಿಮಿಷದಲ್ಲಿ ತಲುಪಬಹುದಿತ್ತು. ಆದರೆ, ಹತ್ತಿರದಲ್ಲಿ ಇರುವ ಹೋಟೆಲ್‌ಗೆ ಚಾಲಕನು ಪ್ರವಾಸಿಯನ್ನು ದಾರಿ ತಪ್ಪಿಸಿ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರವಾಸಿಗನಿಗೆ ಮುಂಬೈ ರಸ್ತೆಗಳ ಪರಿಚಯವಿಲ್ಲದ ಕಾರಣ ಮತ್ತು ಭಾಷೆಯ ಸಮಸ್ಯೆಯಿಂದಾಗಿ ಪ್ರಯಾಣಿಕನನ್ನು ಸುತ್ತಿ ಬಳಸಿ ಕರೆದೊಯ್ದಿದ್ದಾನೆ. ಅಂತಿಮವಾಗಿ ಹೋಟೆಲ್ ತಲುಪಿಸಿದಾಗ, ಆತ ವಿಮಾನ ನಿಲ್ದಾಣದ ಪ್ರವೇಶ ಶುಲ್ಕ, ಪಾರ್ಕಿಂಗ್ ಮತ್ತು ವಿಶೇಷ ತೆರಿಗೆಗಳ ನೆಪ ಹೇಳಿ ಬರೋಬ್ಬರಿ 18,000 ರೂ. ಬಿಲ್ ಪಾವತಿಸುವಂತೆ ಒತ್ತಾಯಿಸಿದ್ದಾನೆ. ಪ್ರವಾಸಿಗನು ಬೇರೆ ಮಾರ್ಗವಿಲ್ಲದೇ ಹಣ ಪಾವತಿಸಿದ್ದಾನೆ.
ಈ ಘಟನೆಯನ್ನು ಪ್ರವಾಸಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂಬೈನ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಹಿಲ್ಟನ್ ಹೋಟೆಲ್‌ಗೆ ಟ್ಯಾಕ್ಸಿ ತೆಗೆದುಕೊಂಡೆ. ಆದರೆ, ಚಾಲಕನು ನೇರವಾಗಿ ಕರೆದುಕೊಂಡು ಹೋಗುವ ಬದಲು, ಕ್ಯಾಬ್ನಲ್ಲಿದ್ದ ಮತ್ತೊಂದು ಮಹಿಳೆಯನ್ನು ಬೇರೊಂದು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಿಟ್ಟು ನಂತರ ನನ್ನನ್ನು ಹೋಟೆಲ್‌ಗೆ ಇಳಿಸಿ ಸುಮಾರು 18,000 ರೂ ಮೊತ್ತವನ್ನು ವಿಧಿಸಿದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು, ನಾವು ನಿಮ್ಮನ್ನು ಅನುಸರಿಸಿದ್ದೇವೆ. ದಯವಿಟ್ಟು ನಿಮ್ಮ ಸಂಪರ್ಕ ಮತ್ತು ವಿವರಗಳನ್ನು ಹಂಚಿಕೊಳ್ಳಿ ಎಂದು ಬರೆದಿದ್ದಾರೆ.
ನಂತರ ಪೊಲೀಸರು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡು ಮೂರು ಗಂಟೆಗಳ ಒಳಗೆ ಚಾಲಕ ಯಾದವ್‌ನನ್ನು ಬಂಧಿಸಿದ್ದಾರೆ. ಆದಾಗ್ಯೂ, ಈ ಸಂಬಂಧ ವಿದೇಶಿ ಪ್ರಜೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಯಾದವ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.