ವಾರಣಾಸಿ: "ಹಿಂದೂ ಧರ್ಮದ ಕುರಿತ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲು ರಾಜ್ಯದಿಂದ ಗೋಮಾಂಸ ರಫ್ತು ನಿಲ್ಲಿಸಿ ಮತ್ತು ಗೋವನ್ನು "ರಾಷ್ಟ್ರ ಮಾತೆ" ಎಂದು ಘೋಷಿಸುವಂತೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಶುಕ್ರವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸವಾಲು ಹಾಕಿದ್ದಾರೆ.
ಪ್ರಯಾಗರಾಜ್‌ನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡದಂತೆ ತಮ್ಮನ್ನು ತಡೆಯಲಾಗಿದೆ ಎಂದು ಆರೋಪಿಸಿದ್ದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ಉತ್ತರ ಪ್ರದೇಶ ಸರ್ಕಾರದ ನಡೆಯನ್ನು ಖಂಡಿಸಿ ಜನವರಿ 18 ರಂದು ಶಂಕರಾಚಾರ್ಯ ಕ್ಯಾಂಪ್ ನಲ್ಲಿ ಸತ್ಯಾಗ್ರಹ ನಡೆಸಿದ್ದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ನಾನು ಅಲ್ಲಿ 11 ದಿನಗಳ ಕಾಲ ಧರಣಿ ಕುಳಿತಿದ್ದಾಗ, ಯಾವುದೇ ಅಧಿಕಾರಿ ಸ್ನಾನ ಮಾಡುವಂತೆ ಹೇಳಲಿಲ್ಲ. ಈಗ ತುಂಬಾ ತಡವಾಗಿದೆ. ಮುಂದಿನ ವರ್ಷ ನಾನು ಮಾಘ ಮೇಳಕ್ಕೆ ಹೋಗಿ ಗೌರವಯುತವಾಗಿ ಪವಿತ್ರ ಸ್ನಾನ ಮಾಡುತ್ತೇನೆ" ಎಂದು ಹೇಳಿದರು.
ಇದೇ ವೇಳೆ, ಹಿಂದೂ ಧರ್ಮದ ಕುರಿತ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲು 40 ದಿನಗಳಲ್ಲಿ ಗೋಹತ್ಯೆಯನ್ನು ನಿಲ್ಲಿಸಿ, ಆಗ ನೀವೊಬ್ಬ ಹಿಂದೂ ಅನುಯಾಯಿ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸವಾಲು ಹಾಕಿದರು.