ನವದೆಹಲಿ: ಸಮಗ್ರ ಆರ್ಥಿಕ ಸ್ಥಿರತೆಯೊಂದಿಗೆ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಗಮನ ಕೇಂದ್ರೀಕರಿಸಿರುವ ಕೇಂದ್ರ ಬಜೆಟ್ 2026 ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
ಖಾಸಗಿ ಬಂಡವಾಳ ಮತ್ತು ಎಲ್ಲಾ ವಲಯಗಳಲ್ಲಿ ಉತ್ಪಾದಕತೆ ಹೆಚ್ಚಿಸುವ ಸುಧಾರಣೆಗಳೊಂದಿಗೆ ಸಾರ್ವಜನಿಕ ಹೂಡಿಕೆಯಲ್ಲಿ ಸಹಭಾಗಿತ್ವದೊಂದಿಗೆ ಭಾರತದ ಮಧ್ಯಮ ಅವಧಿಯ ಬೆಳವಣಿಗೆಯ ಪಥವನ್ನು ಬಲಪಡಿಸಲು ಸರ್ಕಾರ ಪ್ರಾಮುಖ್ಯತೆ ನೀಡಲಿದೆ ಎಂಬುದು ಕಾರ್ಪೊರೇಟ್ ನಾಯಕರ ನಿರೀಕ್ಷೆಯಾಗಿದೆ. ನಾಳೆಯ ಕೇಂದ್ರ ಬಜೆಟ್‌ನಿಂದ ಭಾರತೀಯ ಉದ್ಯಮ ಮತ್ತು ಕಾರ್ಪೊರೇಟ್ ವಲಯ ಏನನ್ನು ನಿರೀಕ್ಷಿಸುತ್ತದೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ಮೂಲಸೌಕರ್ಯಗಳಿಗೆ ಒತ್ತು ನಿರೀಕ್ಷೆ:
ಸರ್ಕಾರ ಬಂಡವಾಳ ವೆಚ್ಚದ ಮೇಲೆ, ವಿಶೇಷವಾಗಿ ಸಾರಿಗೆ, ಸರಕುಗಳು, ನಗರಾಭಿವೃದ್ಧಿ, ವಿದ್ಯುತ್ ಮತ್ತು ಡಿಜಿಟಲ್ ನೆಟ್‌ವರ್ಕ್‌ಗಳಂತಹ ಮೂಲಸೌಕರ್ಯಗಳಲ್ಲಿ ಒತ್ತು ಕೇಂದ್ರದ ನಿರೀಕ್ಷೆಯಾಗಿದೆ. ಕಿರು ಅವಧಿಯ ಬೇಡಿಕೆಯ ಬೆಂಬಲ ಮಾತ್ರವಲ್ಲದೆ ದಕ್ಷತೆ ಸುಧಾರಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಭಾರತದ ದೀರ್ಘಾವಧಿಯ ಬೆಳವಣಿಗೆಯ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಇದು ನಿರ್ಣಾಯಕ ಎಂಬುದು ಉದ್ಯಮಗಳ ಅಭಿಪ್ರಾಯವಾಗಿದೆ. ಬೃಹತ್ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದು ಮತ್ತು ವೆಚ್ಚದ ಪರಿಣಾಮವನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಹೆಚ್ಚಿನ ಸಮನ್ವಯವನ್ನು ಕಂಪನಿಗಳು ಬಯಸುತ್ತಿವೆ.
MSME ಗಳಿಗೆ ಆದ್ಯತೆ: ಬೆಳವಣಿಗೆಯ ದೃಷ್ಟಿಯಿಂದ ಸ್ವದೇಶಿ ಉತ್ಪಾದನೆ, ರಫ್ತು ಮತ್ತು ಎಂಎಸ್‌ಎಂಇಗಳಿಗೆ ಆದ್ಯತೆಯನ್ನು ಪ್ರಮುಖ ಎಂಜಿನ್‌ಗಳಾಗಿ ನೋಡಲಾಗುತ್ತಿದೆ. ಭಾರತೀಯ ಉದ್ಯಮವನ್ನು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸಲು ದೇಶೀಯ ಉತ್ಪಾದನೆ ಹೆಚ್ಚಿಸುವ, ಸಾಲವನ್ನು ಸುಧಾರಿಸುವ, ಉತ್ಪಾದನಾ-ಸಂಬಂಧಿತ ಪ್ರೋತ್ಸಾಹ ಯೋಜನೆಗಳನ್ನು ಬಲಪಡಿಸುವ ಕ್ರಮಗಳನ್ನು ಬಯಸುತ್ತಿವೆ. ರಫ್ತುದಾರರು, ನಿರ್ದಿಷ್ಟವಾಗಿ, ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತವು ಹೆಚ್ಚಿನ ಪಾಲನ್ನು ಪಡೆಯಲು ನೆರವಾಗುವ ವ್ಯಾಪಾರ ಮತ್ತು ಸರಕು ನೀತಿಗಳನ್ನು ಬಯಸುತ್ತಿದ್ದಾರೆ.
ನಾವೀನ್ಯತೆ, ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು: ಭಾರತದ ಬೆಳವಣಿಗೆಯಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. 2026 ರ ಬಜೆಟ್ ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್‌ಗಳು, ಆಳವಾದ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿಯಲ್ಲಿ ಹೂಡಿಕೆಗಳಿಗೆ ಬೆಂಬಲವನ್ನು ಪ್ರಮುಖ ಕಾರ್ಪೊರೇಟ್ ನಾಯಕರು ನಿರೀಕ್ಷಿಸುತ್ತಿದ್ದಾರೆ. ಆರ್ಥಿಕ ಬೆಳವಣಿಗೆಯನ್ನು ಪ್ರಮಾಣದಿಂದ ಮಾತ್ರವಲ್ಲದೆ ಅತ್ಯಾಧುನಿಕತೆಯಿಂದ ಮುನ್ನಡೆಸುವ ಗುರಿ ಹೊಂದಲಾಗಿದೆ.
ತೆರಿಗೆಯಲ್ಲಿ ರಚನಾತ್ಮಕ ಬದಲಾವಣೆ: ತೆರಿಗೆಯಲ್ಲಿ ಪ್ರಮುಖ ರಚನಾತ್ಮಕ ಬದಲಾವಣೆಗಳಿಗಿಂತ ಸ್ಥಿರತೆ, ಭವಿಷ್ಯ ಮತ್ತು ಮತ್ತಷ್ಟು ಸರಳೀಕರಣವನ್ನು ಕಾರ್ಪೋರೇಟ್ ವಲಯ ಹುಡುಕುತ್ತಿದೆ. ವೈಯಕ್ತಿಕ ಆದಾಯ ತೆರಿಗೆ ಪರಿಹಾರವನ್ನು ಅನೇಕರು ಆಶಿಸುತ್ತಿದ್ದಾರೆ. ಇದು ದೇಶೀಯ ಬೇಡಿಕೆಯನ್ನು ಬಲಪಡಿಸುತ್ತದೆ ಮತ್ತು ಬೆಳವಣಿಗೆಯನ್ನು ಬಲಪಡಿಸುತ್ತದೆ. ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ನಲ್ಲಿ ಭಾರತದ ಬೆಳವಣಿಗೆಯನ್ನು ಕಾರ್ಪೋರೇಟ್ ವಲಯ ನಿರೀಕ್ಷಿಸುತ್ತಿದೆ.
$5-ಟ್ರಿಲಿಯನ್ ಗೂ ಹೆಚ್ಚು ಆರ್ಥಿಕತೆ, ಬೆಳವಣಿಗೆ-ಆಧಾರಿತ ಖರ್ಚುಗಳ ಸಮತೋಲವನ್ನು ಪುನರುಚ್ಚರಿಸಿದೆ. ಉದ್ಯಮದ ದೃಷ್ಟಿಯಲ್ಲಿ ಅಲ್ಪಾವಧಿಯ ಉತ್ತೇಜಕಕ್ಕಿಂತ ಧೀರ್ಘ ಹೂಡಿಕೆ, ಬೆಳವಣಿಗೆ ಜೊತೆಗೆ ಉದ್ಯೋಗದ ಸೃಷ್ಟಿಸಬೇಕು ಎಂದು ಪ್ರತಿಪಾದಿಸಿವೆ.