ನವದೆಹಲಿ: ನೈಋತ್ಯ ಮುಂಗಾರು ಜುಲೈ 9 ರಂದು ಭಾರತದಾದ್ಯಂತ ವ್ಯಾಪಿಸಿದ್ದು, ದೇಶದಾದ್ಯಂತ ಅದರ ಪ್ರಗತಿಯು ವಾಡಿಕೆಯ ದಿನಾಂಕವಾದ ಜುಲೈ 8ಕ್ಕಿಂತ ಒಂದು ದಿನ ತಡವಾಗಿ ಪೂರ್ಣಗೊಂಡಂತಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ದೇಶದಾದ್ಯಂತ ವ್ಯಾಪಿಸಲು ಮುಂಗಾರು ಮಳೆಯು ಜುಲೈ 9 ರವರೆಗಿನ ಸಮಯವನ್ನು ತೆಗೆದುಕೊಂಡಿರುವುದು 2011ರ ನಂತರ ಇದೇ ಮೊದಲು.
ಪ್ರತಿ ವರ್ಷ ಸಾಮಾನ್ಯವಾಗಿ ಮುಂಗಾರು ಮಳೆಯು ಜೂನ್ 1 ರಂದು ಕೇರಳವನ್ನು ತಲುಪುತ್ತಿತ್ತು. ಆದರೆ, ಈ ಬಾರಿ ಜೂನ್ 4 ರಂದು ಮೂರು ದಿನ ತಡವಾಗಿ ದೇವರ ನಾಡನ್ನು ತಲುಪಿದೆ.
ಕಳೆದ ವರ್ಷ, ಜೂನ್ 29ರ ಹೊತ್ತಿಗೆ, ನಿಗದಿತ ಸಮಯಕ್ಕಿಂತ ಒಂಬತ್ತು ದಿನ ಮುಂಚಿತವಾಗಿ, ಇಡೀ ದೇಶವನ್ನು ಮಾನ್ಸೂನ್ ಆವರಿಸಿತು ಮತ್ತು ಸಂಪೂರ್ಣ ಮುಂಗಾರು ಹಂಗಾಮಿನಲ್ಲಿ, ಭಾರತದಲ್ಲಿ ದೀರ್ಘಾವಧಿ ಸರಾಸರಿ (LPA) ಮಳೆಯ ಶೇ 108ರಷ್ಟು ಮಳೆ ಪಡೆಯಿತು.
ಭಾರತದಲ್ಲಿ ಜೂನ್-ಸೆಪ್ಟೆಂಬರ್ ಮಾನ್ಸೂನ್ ಅವಧಿಯಲ್ಲಿ ಸುಮಾರು ಶೇ 90 ರಷ್ಟು ಎಲ್‌ಪಿಎ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತದ ಹವಾಮಾನ ಇಲಾಖೆ (IMD) ನಿರೀಕ್ಷಿಸಿದೆ. ಪೆಸಿಫಿಕ್ ಮಹಾಸಾಗರದಲ್ಲಿ ನಿರೀಕ್ಷಿತ ಬಲವಾದ ಎಲ್‌ನಿನೊದಿಂದಾಗಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಇದು ಸಾಮಾನ್ಯವಾಗಿ ಭಾರತದ ಮೇಲೆ ಮಾನ್ಸೂನ್ ಮಳೆಯನ್ನು ಕಡಿಮೆ ಮಾಡುವ ಹವಾಮಾನ ಮಾದರಿಯಾಗಿದೆ.
ಜೂನ್‌ನಲ್ಲಿ ಭಾರತವು ಎಲ್‌ಪಿಎಯ ಶೇ 40 ರಷ್ಟು ಮಳೆ ಕೊರತೆಯನ್ನು ದಾಖಲಿಸಿದ್ದು, 99.5 ಮಿಮೀ ಮಳೆಯಾಗಿದೆ. ಇದು ಈ ತಿಂಗಳ ಐದನೇ ಕನಿಷ್ಠ ಮಳೆಯಾಗಿದೆ. ಆದಾಗ್ಯೂ, ಮಳೆಯು ಜುಲೈ 9ರ ವೇಳೆಗೆ ಕೊರತೆಯನ್ನು ಶೇ 15.2ಕ್ಕೆ ಇಳಿಸಿದೆ.
ದೇಶದಲ್ಲಿ ಇದುವರೆಗೆ 195.5 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯವಾಗಿ 230.4 ಮಿಮೀ ಮಳೆಯಾಗುತ್ತಿತ್ತು.
ಜುಲೈ 9ರಂದು ಐಎಂಡಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನೈಋತ್ಯ ಮಾನ್ಸೂನ್ ಉತ್ತರ ಅರೇಬಿಯನ್ ಸಮುದ್ರದ ಉಳಿದ ಭಾಗಗಳು, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ಗೆ ತಲುಪಿದ್ದು, ಇಡೀ ದೇಶದಾದ್ಯಂತ ತನ್ನ ವ್ಯಾಪ್ತಿಯನ್ನು ಪೂರ್ಣಗೊಳಿಸಿದೆ ಎಂದು ಹೇಳಿದೆ.
ಮಾನ್ಸೂನ್ ಕೊರತೆಯು ಖಾರಿಫ್ ಬಿತ್ತನೆ ಮೇಲೂ ಪರಿಣಾಮ ಬೀರಿದೆ. ಇಲ್ಲಿಯವರೆಗೆ ಸುಮಾರು 350 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಮಾಡಲಾಗಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸುಮಾರು 92 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ.