ಜೈಪುರ ಮಹಿಳೆ ಕೊಲೆ ಪ್ರಕರಣ ಮತ್ತು ಆರೋಪಿ ಆಯುಷಿ ಶರ್ಮಾ 
ದೇಶ

ಜೈಪುರ ಮಹಿಳೆ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ತಾಯಿಗೂ ಮೊದಲೇ ತಂದೆಯನ್ನೂ ಕೊಂದಿದ್ದಳೇ ಹಂತಕ ಪುತ್ರಿ? ಸೋದರಮಾವ ಹೇಳಿದ್ದೇನು?

ನೀರಜ್ ಶರ್ಮಾ ಕೊಲೆ ಪ್ರಕರಣದ ತನಿಖೆಯು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಮಗಳು ಆಯುಷಿ ಶರ್ಮಾಳೇ ತಂದೆ ವಿಜಯ್ ಶರ್ಮಾ ಅವರ ಸಾವಿಗೂ ಕಾರಣಳಾಗಿದ್ದಾಳೆ..

ಜೈಪುರ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಜೈಪುರ ಮಹಿಳೆ ಕೊಲೆ ಪ್ರಕರಣದಲ್ಲಿ ಮತ್ತೊಂದು ಮೇಜರ್ ಟ್ವಿಸ್ಟ್ ದೊರೆತಿದ್ದು, ತಾಯಿಯನ್ನು ಕೊಂದಿದ್ದ ಹಂತಕ ಪುತ್ರಿಯೇ ತನ್ನ ತಂದೆಯನ್ನೂ ಕೊಂದಿದ್ದಳೇ ಎಂಬ ಅನುಮಾನ ಮೂಡುತ್ತಿದೆ.

ಹೌದು.. ನೀರಜ್ ಶರ್ಮಾ ಕೊಲೆ ಪ್ರಕರಣದ ತನಿಖೆಯು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಮಗಳು ಆಯುಷಿ ಶರ್ಮಾಳೇ ತಂದೆ ವಿಜಯ್ ಶರ್ಮಾ ಅವರ ಸಾವಿಗೂ ಕಾರಣಳಾಗಿದ್ದಾಳೆ ಎಂಬ ಹೊಸ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿದ್ದು ವಿಜಯ್ ಶರ್ಮಾ ಅವರ ಸಾವು ಸ್ವಾಭಾವಿಕವಾಗಿ ಸಂಭವಿಸಿಲ್ಲ ಎಂದು ನೀರಜ್ ಅವರ ಸಹೋದರ ಮತ್ತೊಂದು ದೂರು ನೀಡಿದ ಹಿನ್ನೆಲೆಯಲ್ಲಿ, ಪೊಲೀಸರು ಈಗ 2025ರಲ್ಲಿ ನಡೆದ ವಿಜಯ್ ಅವರ ಸಾವಿನ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.

ತಾಯಿ ಕೊಲೆ ಆರೋಪದಲ್ಲಿ ಜೈಲುಪಾಲಾಗಿರುವ ಆಯುಷಿಗೆ ಮತ್ತೊಂದು ಆಘಾತ

ಇನ್ನು ತನ್ನ ತಾಯಿಯ ಕೊಲೆ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಮಗಳು ಆಯುಷಿ ಶರ್ಮಾ, ಕುಟುಂಬದ ಆಸ್ತಿ ಮತ್ತು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ದೊಡ್ಡ ಸಂಚಿನ ಭಾಗವಾಗಿ ತನ್ನ ತಂದೆಯ ಸಾವಿನಲ್ಲೂ ಭಾಗಿಯಾಗಿದ್ದಾಳೆ ಎಂಬ ಆರೋಪಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿರುವ ಬೆನ್ನಲ್ಲೇ ಈ ಹೊಸ ತನಿಖೆಯು ಮುನ್ನೆಲೆಗೆ ಬಂದಿದೆ.

ಮತ್ತೋರ್ವ ಆರೋಪಿ ಆಯುಷಿಯ ಸೋದರಸಂಬಂಧಿ ಬಲರಾಮ್ ತಲೆಮರೆಸಿಕೊಂಡಿದ್ದಾನೆ. ಕೆಳಹಂತದ ವಿಭಾಗೀಯ ಕ್ಲರ್ಕ್ ಆಗಿದ್ದ ನೀರಜ್ ಅವರನ್ನು ಸ್ಕಾರ್ಪಿಯೋ ಎಸ್ಯುವಿ ಕಾರಿನಿಂದ ಢಿಕ್ಕಿ ಹೊಡೆಸಿ ಕೊಲ್ಲಲಾಗಿತ್ತು. ಬಳಿಕ ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲಾಗಿತ್ತು. ಈ ಪ್ರಕರಣದಲ್ಲಿ ಆಯುಷಿ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.

ಆಯುಷಿ ಸೋದರಮಾವ ಹೇಳಿದ್ದೇನು?

ನೀರಜ್ ಶರ್ಮಾ ಅವರ ಸಹೋದರ ಹಾಗೂ ಆಯುಷಿಯ ಸೋದರಮಾವ ರಾಕೇಶ್ ಶರ್ಮಾ ಅವರು, ವಿಜಯ್ ಶರ್ಮಾ ಅವರ ಸಾವಿನ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿ ಪೊಲೀಸ್ ಮತ್ತು ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದಾರೆ. ರಾಜಸ್ಥಾನ ಹೈಕೋರ್ಟ್‌ನಲ್ಲಿ ಕೋರ್ಟ್ ಮಾಸ್ಟರ್ ಆಗಿದ್ದ ವಿಜಯ್ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರೂ ಚಿಕಿತ್ಸೆ ಸಿಗದಂತೆ ಆಯುಷಿ ತಡೆದಿದ್ದಾರೆ ಎಂದು ರಾಕೇಶ್ ದೂರಿನಲ್ಲಿ ಆರೋಪಿಸಿದ್ದಾರೆ.

ಉತ್ತಮ ಚಿಕಿತ್ಸೆಯನ್ನು ಕಂಡುಕೊಂಡಿರುವುದಾಗಿ ಹೇಳಿ, ಆಯುಷಿ ತನ್ನ ಸೋದರಸಂಬಂಧಿ ಬಲರಾಮ್ ಜೊತೆಗೂಡಿ ವಿಜಯ್ ಅವರನ್ನು ಮನೆಯಿಂದ ಕರೆದೊಯ್ದಿದ್ದಳು. ಆದರೆ ಸುಮಾರು ಮೂರು ತಿಂಗಳವರೆಗೆ ಅವರು ಎಲ್ಲಿದ್ದಾರೆ ಎಂಬ ವಿಷಯವನ್ನು ಯಾರಿಗೂ ತಿಳಿಸಲು ನಿರಾಕರಿಸಿದ್ದಳು.

ಬಳಿಕ ವಿಜಯ್ ಅವರನ್ನು ಜೈಪುರದ ನಿವಿಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಂಧುಗಳು ಆಸ್ಪತ್ರೆಗೆ ತಲುಪಿದಾಗ, ಅವರ ದೇಹದ ಸುಮಾರು ಶೇಕಡಾ 90ರಷ್ಟು ಭಾಗವು ತೀವ್ರವಾಗಿ ಹಾನಿಗೊಳಗಾಗಿದೆ ಎಂದು ವೈದ್ಯರು ಅವರಿಗೆ ತಿಳಿಸಿದ್ದರು. ಆಯುಷಿ ಅವರನ್ನು ಮನೆಗೆ ಕರೆತಂದ ಬಳಿಕ ಅವರು ನಿಧನರಾಗಿದ್ದರು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಂದೆ ಸಾವಿನ ಬೆನ್ನಲ್ಲೇ ಆಸ್ತಿಗಾಗಿ ಆಯುಷಿ ಪಟ್ಟು

ವಿಜಯ್ ಅವರನ್ನು ಆಯುಷಿ ಮತ್ತು ಬಲರಾಮ್ ತಮ್ಮ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಅವರ ಮರಣದ ಬೆನ್ನಲ್ಲೇ, ಆಯುಷಿ ತಾನು ತನ್ನ ತಂದೆಯ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದಳು ಹಾಗೂ ಕುಟುಂಬದ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಪಟ್ಟು ಹಿಡಿದಿದ್ದಳು ಎಂದು ರಾಕೇಶ್ ಆರೋಪಿಸಿದ್ದಾರೆ.

ಜಗಳವೊಂದರ ಸಮಯದಲ್ಲಿ ಆಯುಷಿ ತನ್ನ ತಾಯಿಗೆ, ತಂದೆಯ ಫೀಡಿಂಗ್ ಟ್ಯೂಬ್ (ಆಹಾರ ನೀಡುವ ನಳಿಕೆ) ಅನ್ನು ತೆಗೆದು ಅವರನ್ನು ಕೊಲ್ಲಬಹುದಾದರೆ, ನಿನ್ನನ್ನು ಕೊಲ್ಲುವುದು ಇನ್ನೂ ಸುಲಭ ಎಂದು ಹೇಳಿ ಬೆದರಿಕೆ ಹಾಕಿದ್ದಳು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸ್ ಉಪ ಆಯುಕ್ತೆ ರಂಜಿತಾ ಶರ್ಮಾ ಅವರು ಹೊಸ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ವಿಜಯ್ ಶರ್ಮಾ ಅವರ ಸಾವಿಗೆ ಸಂಬಂಧಿಸಿದಂತೆ ನೀರಜ್ ಶರ್ಮಾ ಅವರ ಕುಟುಂಬಸ್ಥರು ಮಾಡಿರುವ ಆರೋಪಗಳನ್ನು ಪ್ರಸ್ತುತ ನಡೆಯುತ್ತಿರುವ ತನಿಖೆಯ ಭಾಗವಾಗಿ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

ತನ್ನದೇ ಕುಟುಂಬಸ್ಥರ ವಿರುದ್ಧ ದ್ವೇಷ?

ತನ್ನ ತಾಯಿಯನ್ನು ಕೊಲ್ಲುವ ಯೋಜನೆಗಳ ಬಗ್ಗೆ ತಾನು ಬಲರಾಮ್ ಜೊತೆ ಚರ್ಚಿಸಿರುವುದನ್ನು ಅವಳು ಒಪ್ಪಿಕೊಂಡಿದ್ದಾಳೆ ಮತ್ತು ಕುಟುಂಬದ ಆಸ್ತಿ ವಿವಾದಗಳು ಹಾಗೂ ಆಳವಾದ ದ್ವೇಷವೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿರುವ ಆಕೆಗೆ ಕಾನೂನಿನ ಅರಿವಿದ್ದು, ಅತ್ಯಂತ ಚಾಣಾಕ್ಷತೆಯಿಂದ ಯೋಚಿಸುತ್ತಾಳೆ.

ಆಕೆಯ ವಿಚಾರಣೆಗೆ ಮನಶ್ಶಾಸ್ತ್ರಜ್ಞರು ಸಹಾಯ ಮಾಡಲಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈ ಹೊಸ ತನಿಖೆಯ ಫಲಿತಾಂಶದ ಆಧಾರದ ಮೇಲೆ ಪೊಲೀಸರು ಹೆಚ್ಚಿನ ಸೆಕ್ಷನ್‌ಗಳನ್ನು ಸೇರಿಸಬೇಕೇ ಅಥವಾ ವಿಜಯ್ ಅವರ ಸಾವಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel